ಗುಜರಾತ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಕಳ್ಳಭಟ್ಟಿ ಮಾರಾಟವೂ ಒಂದು ವೃತ್ತಿ!
ಅಹ್ಮದಾಬಾದ್,ಎ.15: ವೈದ್ಯ,ಇಂಜಿನಿಯರ್,ಶಿಕ್ಷಕ ಇತ್ಯಾದಿಗಳೆಲ್ಲ ವೃತ್ತಿಗಳು ಎಂದು ಎಲ್ಲರಿಗೂ ಗೊತ್ತು. ಆದರೆ ಕಳ್ಳಭಟ್ಟಿ ಮಾರಾಟ,ಸುಪಾರಿ ಹತ್ಯೆ,ಜುಗಾರಿ ಇತ್ಯಾದಿಗಳೆಲ್ಲ ಏನು? ಇವೂ ವೃತ್ತಿಗಳು ಎನ್ನುತ್ತಿದೆ ಗುಜರಾತ್ ಪೊಲೀಸ್ ಇಲಾಖೆ!
ಡಿಜಿಟಲ್ ಇಂಡಿಯಾ ಉಪಕ್ರಮಕ್ಕನುಗುಣವಾಗಿ ಗುಜರಾತ್‌ನ ನಿವಾಸಿಗಳು ನಗರ ಪ್ರದೇಶಗಳಲ್ಲಿ ಅಥವಾ ಬೋಪಲ್‌ನಂತಹ ಉಪನಗರಗಳಲ್ಲಿ ವಾಸಿಸುತ್ತಿದ್ದರೆ ತಮ್ಮ ಮನೆಗೆಲಸದಾಳು ಅಥವಾ ಬಾಡಿಗೆದಾರರ ವಿವರಗಳನ್ನು ದಾಖಲಿಸಲು ನಗರ ಅಥವಾ ಜಿಲ್ಲಾ ಪೊಲೀಸ್‌ನ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಮೊದಲ ಹೆಜ್ಜೆಯಾಗಿ ಜನರು ತಮ್ಮನ್ನು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಪಾಸ್‌ವರ್ಡ್‌ನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ತಮ್ಮ ಹೆಸರು,ವಿಳಾಸ,ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ವೆಬ್‌ಸೈಟ್‌ನಲ್ಲಿರುವ ನಿಗದಿತ ನಮೂನೆಯಲ್ಲಿ ತುಂಬಬೇಕು.ಉದ್ಯೋಗದ ಕಾಲಮ್‌ವರೆಗೂ ಎಲ್ಲವೂ ಮಾಮೂಲಾಗಿಯೇ ಸಾಗುತ್ತದೆ. ಇಲ್ಲಿ ಬರೋಬ್ಬರಿ 124 ಆಯ್ಕೆಗಳೊಂದಿಗೆ ಉದ್ಯೋಗ/ವೃತ್ತಿಯ ಬಹು ದೊಡ್ಡ ಪಟ್ಟಿಯೇ ಕಾಣುತ್ತದೆ. ಆದರೂ ಈ ವೆಬ್‌ಸೈಟ್‌ನ್ನು ಅಭಿವೃದ್ಧಿಪಡಿಸಿದವರ ತಲೆಯಲ್ಲಿ ವೃತ್ತಿಗಳೆಂದರೆ ಏನು ಕಲ್ಪನೆಗಳಿವೆ ಎನ್ನುವುದನ್ನು ನೀವು ಕಾಣಬಹುದು. ವೈದ್ಯ,ಇಂಜಿನಿಯರ್, ಶಿಕ್ಷಕ ಇತ್ಯಾದಿ ಮಾಮೂಲು ವೃತ್ತಿಗಳ ಜೊತೆಗೆ ನೀವು ಅಚ್ಚರಿ ಪಡಬಹುದಾದ ಇತರ ವೃತ್ತಿಗಳೂ ಇಲ್ಲಿವೆ. ಈ ವೆಬ್‌ಸೈಟ್‌ನಲ್ಲಿ ತೋರಿಸಿರುವಂತೆ ಕಳ್ಳಭಟ್ಟಿ ಮಾರಾಟ, ಸುಪಾರಿ ಹತ್ಯೆ, ಮಾದಕ ದ್ರವ್ಯ ಮಾರಾಟ, ಜುಗಾರಿ ಮತ್ತು ಕಳ್ಳಸಾಗಾಣಿಕೆ ಇವೆಲ್ಲವೂ ವೃತ್ತಿಗಳಾಗಿವೆ. ಭಿಕ್ಷುಕ, ಬಾಡಿಗೆ ಹಂತಕ, ಅಲೆಮಾರಿ, ಪ್ರವಾಸಿ ಇತ್ಯಾದಿಗಳೂ ಇಲ್ಲಿ ವೃತ್ತಿಯ ಗೌರವ ಪಡೆದಿವೆ!
ಸರಕಾರದ ಅಧಿಕೃತ ಜಾಲತಾಣದ ಮೂಲಕ ರೂಪುಗೊಂಡ ಎಲ್ಲ ಜಿಲ್ಲಾ ಪೊಲೀಸ್ ಮತ್ತು ನಾಲ್ಕು ಕಮಿಷನರೇಟ್‌ಗಳ ವೆಬ್‌ಸೈಟ್‌ಗಳಲ್ಲಿಯ ಡ್ರಾಪ್ ಡೌನ್ ಬಾಕ್ಸ್‌ಗಳಲ್ಲಿ ಈ ಪಟ್ಟಿಯನ್ನು ಕಾಣಬಹುದು. ತಮ್ಮದೇ ಸ್ವಂತ ವೆಬ್‌ಸೈಟ್‌ಗಳನ್ನು ಹೊಂದಿರುವ ಅಹ್ಮದಾಬಾದ್ ಪೊಲೀಸ್‌ನಂತಹ ಕೆಲವು ಪೊಲೀಸ್ ಘಟಕಗಳ ವೆಬ್‌ಸೈಟ್‌ಗಳಲ್ಲಿ ಮಾತ್ರ ಈ ಆಭಾಸಕಾರಿ ಪಟ್ಟಿ ಕಂಡುಬರುತ್ತಿಲ್ಲ.
ವೆಬ್ ಹೋಸ್ಟಿಂಗ್ ಮಾತ್ರ ನಮಗೆ ಸಂಬಂಧಿಸಿದೆಯೇ ಹೊರತು ಅದರಲ್ಲಿಯ ವಿಷಯಗಳಲ್ಲ. ಆಯಾ ಇಲಾಖೆಗಳು ನಮಗೆ ಒದಗಿಸುವ ವಿಷಯವನ್ನು ನಾವು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡುತ್ತೇವೆ ಎನ್ನುತ್ತಾರೆ ಸರಕಾರಿ ಜಾಲತಾಣಗಳ ನಿರ್ವಹಣೆಯ ಹೊಣೆ ಹೊತ್ತಿರುವ ಗುಜರಾತ್ ಇನ್‌ಫಾರ್ಮೆಟಿಕ್ಸ್ ಲಿ.ನ ಇ-ಆಡಳಿತ ನಿರ್ದೇಶಕ ವಿವೇಕ್ ಉಪಾಧ್ಯಾಯ.