ಲಿಮ್ಕಾದಲ್ಲಿ ದಾಖಲೆಯಾದ ಶಾಂತೆಯಂಡ ಕಪ್ ಹಾಕಿ ಉತ್ಸವ

ಮಡಿಕೇರಿ ಏ.15 :2016ರ ಶಾಂತೆಯಂಡ ಕಪ್ ಹಾಕಿ ಉತ್ಸವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗುವುದರೊಂದಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ. ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಹಾಕಿ ಪಂದ್ಯಾವಳಿಗೆ ನಾಪೋಕ್ಲು ಸಜ್ಜಾಗುತ್ತಿರುವಾಗಲೇ ಈ ಸಿಹಿ ಸುದ್ದಿ ಹೊರ ಬಿದ್ದಿದೆ ಎಂದು ಶಾಂತೆಯಂಡ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂತೆಯಂಡ ಕಪ್ ಹಾಕಿ ನಮ್ಮೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ 2016ರಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಶಾಂತೆಯಂಡ ಕಪ್ ಹಾಕಿ ಉತ್ಸವದಲ್ಲಿ ದಾಖಲೆಯ 299ಕುಟುಂಬ ತಂಡಗಳು ನೋಂದಾಯಿಸಿಕೊಂಡಿದ್ದವು. ಅಲ್ಲದೆ ಪಂದ್ಯಾವಳಿಯು ಯಾವುದೇ ನ್ಯೂನ್ಯತೆಗಳಿಲ್ಲದೆ ಯಶಸ್ವಿಯಾಗಿ ನಡೆದಿದೆ. ಇದರಿಂದಾಗಿ ಶಾಂತೆಯಂಡ ಕಪ್ ಹಾಕಿ ಉತ್ಸವ ದೇಶದ ಪ್ರತಿಷ್ಠಿತ ದಾಖಲೆಯಾಗಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ. ಕೊಡಗಿನ ಕೌಟುಂಬಿಕ ಹಾಕಿ ನಮ್ಮೆಗೆ ಇದು ಮತ್ತೊಂದು ಗರಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದಲ್ಲಿ ಈ ಹಿಂದೆ ಬಿದ್ದಂಡ, ನೆಲ್ಲಮಕ್ಕಡ ಮತ್ತು ಕುಪ್ಪಂಡ ಕಪ್ ಹಾಕಿ ಪಂದ್ಯಾವಳಿಗಳು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದವು. ಇದೀಗ ಶಾಂತೆಯಂಡ ಕಪ್ ಹಾಕಿ ಉತ್ಸವದಲ್ಲಿ 299 ತಂಡಗಳ ಪಾಲ್ಗೊಳ್ಳುವಿಕೆಯಿಂದಾಗಿ ಈ ದಾಖಲೆ ಮತ್ತೊಮ್ಮೆ ಉನ್ನತೀಕರಣಗೊಂಡಿದೆ ಎಂದು ಅವರು ಹೇಳಿದರು.
ಶಾಂತೆಯಂಡ ಕಪ್ ಹಾಕಿ ಉತ್ಸವದ ಈ ಸಾಧನೆಗೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಕುಟುಂಬಗಳು, ತಾಂತ್ರಿಕ ಸಮಿತಿ, ಹಾಕಿ ಕೂರ್ಗ್, ಕೊಡವ ಹಾಕಿ ಅಕಾಡೆಮಿ, ಕ್ರೀಡಾಭಿಮಾನಿಗಳು, ಮಾಧ್ಯಮಗಳು, ಜನಪ್ರತಿನಿಧಿಗಳು, ಮಂಗಳೂರು ವಿವಿ ಮತ್ತು ಎಫ್‌ಎಂಸಿ ಕಾಲೇಜು ಪ್ರಾಂಶುಪಾಲರು, ನಗರಸಭೆ, ಪೊಲೀಸ್ ಇಲಾಖೆ ಮಡಿಕೇರಿ ಕೊಡವ ಸಮಾಜ ಹಾಗೂ ನಗರದ ಎಲ್ಲಾ ಕೊಡವ ಕೇರಿಗಳು, ದಾನಿಗಳು, ಶಾಂತೆಯಂಡ ಕುಟುಂಬಸ್ಥರು, ಸಂಘಸಂಸ್ಥೆಗಳು ಕಾರಣ ಎಂದು ಸ್ಮರಿಸಿದರು.
ಪಂದ್ಯಾವಳಿಗೆ ಸುಮಾರು 90 ಲಕ್ಷ ರೂ.ಗಳಷ್ಟು ವೆಚ್ಚವಾಗಿದ್ದು, ರಾಜ್ಯ ಸರಕಾರ 40 ಲಕ್ಷ ರೂ. ಘೋಷಿಸಿದ್ದು, ಈ ಪೈಕಿ 30 ಲಕ್ಷಗಳನ್ನು ನೀಡಿದೆ. ಸಂಸದ ಪ್ರತಾಪ್‌ಸಿಂಹ ಅವರು 35 ಲಕ್ಷ ರೂ. ಅನುದಾನವನ್ನು ನೀಡಿದ್ದು, ಇದರಲ್ಲಿ ಕಾಲೇಜಿನ ಮೈದಾನವನ್ನು ವಿಸ್ತರಿಸುವುದರೊಂದಿಗೆ ಸುಮಾರು 10 ಸಾವಿರ ಲೀಟರ್‌ನ ಶಾಶ್ವತ ನೀರಿನ ಟ್ಯಾಂಕನ್ನು ಹಾಗೂ ವೇದಿಕೆಯನ್ನು ನಿರ್ಮಿಸಿಕೊಡಲಾಗಿದೆ ಎಂದು ಶಾಂತೆಯಂಡ ರವಿಕುಶಾಲಪ್ಪ ತಿಳಿಸಿದರು. ಬಿರು ಬೇಸಿಗೆಯಲ್ಲಿ ನಡೆದ ಪಂದ್ಯಾವಳಿಯ ಸಂದರ್ಭದಲ್ಲಿ ಅಷ್ಟೂ ದಿನಗಳ ಕಾಲ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಯಾಲದಾಳು ಕುಟುಂಬದ ವೈ.ಟಿ.ಗಣಪತಿ ಮತ್ತು ಕುಟುಂಬದವರು ನೋಡಿಕೊಂಡಿದ್ದು, ಅದಕ್ಕಾಗಿ ಅವರುಗಳಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಪಂದ್ಯಾವಳಿಯಲ್ಲಿ ದಾಖಲೆಯ 299 ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದು, ಶಾಂತೆಯಂಡ ಕಪ್ ಹಾಕಿ ಪಂದ್ಯಾವಳಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದ್ದು, ಈಗಾಗಲೇ ಸಂಸ್ಥೆಯ ಶುಲ್ಕವನ್ನು ಪಾವತಿಸಿಕೊಂಡಿದೆ ಎಂದರು. ಈ ಬಾರಿ ಬಿದ್ದಾಟಂಡ ಕುಟುಂಬಸ್ಥರು ನಡೆಸುವ ಬಿದ್ದಾಟಂಡ ಕಪ್ ಹಾಕಿ ಪಂದ್ಯಾವಳಿಗೆ 306 ತಂಡಗಳು ನೋಂದಣಿ ಮಾಡಿಕೊಂಡಿರುವುದು ಹಾಕಿ ಪಂದ್ಯಾವಳಿಯ ಬಗ್ಗೆ ಕೊಡವ ಕುಟುಂಬಗಳಲ್ಲಿರುವ ಅಭಿಮಾನವನ್ನು ತೋರಿಸಿದೆ. ಜಿಲ್ಲೆಯಲ್ಲಿ ಸುಮಾರು 800ರಿಂದ ಒಂದು ಸಾವಿರದಷ್ಟು ಕೊಡವ ಮನೆತಗಳಿದ್ದು, ಮುಂದಿನ ದಿನಗಳಲ್ಲಿ ಹಾಕಿ ಉತ್ಸವದಲ್ಲಿ ಭಾಗವಹಿಸುವ ಕೊಡವ ಕುಟುಂಬಗಳ ತಂಡದ ಸಂಖ್ಯೆ ಏರುಮುಖದಲ್ಲೇ ಸಾಗುವಂತಾಗಲಿ ಅಲ್ಲದೆ ಕ್ರೀಡಾ ಸ್ಪೂರ್ತಿ ಮುಂದುವರಿದು ದಾಖಲೆಗಳ ಸಂಖ್ಯೆಯೂ ಹೆಚ್ಚಲಿ ಎಂದು ರವಿಕುಶಾಲಪ್ಪ ಹೇಳಿದರು.
ಶಾಶ್ವತ ಅನುದಾನ ಬೇಕು
ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವಕ್ಕೆ ರಾಜ್ಯ ಸರಕಾರ ಪ್ರತೀವರ್ಷ ಅನುದಾನವನ್ನು ನೀಡುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸರಕಾರ ಈ ಉತ್ಸವಕ್ಕೆ ತನ್ನ ಬಜೆಟ್‌ನಲ್ಲಿ ಶಾಶ್ವತವಾಗಿ ಕನಿಷ್ಟ 50 ಲಕ್ಷ ರೂ.ಗಳನ್ನು ಮೀಸಲಿಡುವುದು ಸೂಕ್ತವೆಂದರು.
ಸುದ್ದಿಗೋಷ್ಠಿಯಲ್ಲಿ ಶಾಂತೆಯಂಡ ಕುಟುಂಬದ ಅಧ್ಯಕ್ಷ ಶಾಂತೆಯಂಡ ಬಿ. ಬೋಪಯ್ಯ, ಉಪಾಧ್ಯಕ್ಷ ದೇವರಾಜ್, ಹಾಕಿ ಉತ್ಸವದ ಮೈದಾನ ಸಮಿತಿಯ ತಿಮ್ಮಯ್ಯ ಹಾಗೂ ಮಾಹಿತಿ ಸಂಗ್ರಾಹಕ ನಿರನ್ ಉಪಸ್ಥಿತರಿದ್ದರು.







