ಲಾರಿಗಳಲ್ಲಿ ಅನುಮತಿ ಪಡೆದಷ್ಟು ತೂಕದ ಸರಕು ಮಾತ್ರ ಸಾಗಣೆ: ಲಾರಿ ಮಾಲಕರ ಸಂಘ
ಚಿಕ್ಕಮಗಳೂರು, ಎ.15: ಲಾರಿಗಳಲ್ಲಿ ಪಾಸಿಂಗ್ ನೀಡಿರುವಷ್ಟೇ ಸರಕನ್ನು ಸಾಗಣೆ ಮಾಡಲು ನಮ್ಮ ಲಾರಿ ಮಾಲಕರ ಸಂಘವು ನಿರ್ಧರಿಸಿದ್ದು, ಕಾನೂನಿನಂತೆ ಅನುಮತಿ ಪಡೆದಷ್ಟು ತೂಕದ ಸರಕು ಮಾತ್ರ ಸಾಗಿಸಲಾಗುವುದು ಎಂದು ಜಿಲ್ಲಾ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.
ಕಾನೂನು, ನೀತಿ, ನಿಯಮಗಳನ್ನು ಉಲ್ಲಂಘಿಸಿ ಸರಕು ಸಾಗಣೆ ಮಾಡುತ್ತಿರುವ ಲಾರಿಗಳು ಕಂಡು ಬರುತ್ತಿದೆ. ಎ.15ರಂದು ಕೂಡ ಬೆಳಿಗ್ಗೆ ಒಂದು ಲಾರಿಯನ್ನು ಪತ್ತೆ ಹಚ್ಚಿ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ರಾಘವೇಂದ್ರರವರಿಗೆ ಮಾಹಿತಿ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಆರ್‌ಟಿಓ ಕಛೇರಿಗೆ 6 ಮಂದಿ ಆಟ್‌ಟುಓ ಅಧಿಕಾರಿಗಳ ಅಗತ್ಯವಿದೆ. ಆದರೆ ಸಿಬ್ಬಂಧಿಗಳ ಕೊರತೆಯಿಂದ ಕಾನೂನು ಉಲ್ಲಂಘನೆಗಳು ನಡೆಯುತ್ತಿವೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಲಾರಿ ತೂಕವೂ ಸೇರಿ ಗರಿಷ್ಟ 15 ಟನ್ ಮಿತಿಯ ಸಾಗಣೆಯನ್ನು ಜಿಲ್ಲಾಧಿಕಾರಿಗಳು ವಿಧಿಸಿದ್ದಾರೆ. ಇದನ್ನು ಮೀರಿ 30-40 ಟನ್ ಸರಕು ತುಂಬಿಕೊಂಡು ಸಾಗಾಟ ನಡೆಯುತ್ತಿದ್ದು, ರಸ್ತೆ ಮತ್ತು ಚರಂಡಿಗಳು ಹಾನಿಗೀಡಾಗುತ್ತಿವೆ. ಇದನ್ನು ತಡೆಯಲು ಆರ್‌ಟಿಓ ಸಿಬ್ಬಂಧಿಗಳ ಕೊರತೆಯಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಅತಿಯಾದ ಹೊಗೆ ಉಗುಳುವ ವಾಹನಗಳ ತಪಾಷಣೆ, ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡು ಅತೀಯಾದ ಶಬ್ದದೊಂದಿಗೆ ಸಾಗುವ ದ್ವಿಚಕ್ರ ವಾಹನಗಳು, ಅತಿವೇಗದ ಚಾಲನೆ, ಹದಿನೆಂಟಕ್ಕಿಂತ ಚಿಕ್ಕ ವಯಸ್ಸಿನ ಮಂದಿ ವಾಹನ ಚಾಲನೆ ಇತ್ಯಾದಿ ಸಮರ್ಪಕವಾಗಿ ತಪಾಷಣೆ ನಡೆಸಿ ತಪ್ಪಿತಸ್ಥರಿಗೆ ದಂಡ ಮತ್ತು ಸೂಕ್ತ ಕ್ರಮಗಳನ್ನು ವಿಧಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.







