ಲಾರಿ - ಕಾರು ಢಿಕ್ಕಿ : ವ್ಯಕ್ತಿ ಸಾವು

ಗುಂಡ್ಲುಪೇಟೆ,ಎ.15 : ಸಮೀಪದ ಕುರುಬರಹುಂಡಿ ಬಳಿಯಿರುವ ಓಂಕಾರ್ ವಲಯ ಅರಣ್ಯ ಕಛೇರಿಯ ಬಳಿ ಹೆಡಿಯಾಲ ಕಡೆಯಿಂದ ಬೇಗೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ(ಎಪಿ-26-ಟಿಟಿ6070) ಹಾಗೂ ಬೇಗೂರು ಕಡೆಯಿಂದ ಹೆಡಿಯಾಲ ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೋ ಕಾರು (ಕೆಎ10-ಎಂ1508) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕಾರ್ಪಿಯೋ ಕಾರಿನಲ್ಲಿದ್ದ ಬೇಗೂರು ಸಮೀಪದ ತಗ್ಗಲೂರು ಗ್ರಾಮದ ಬಸವಣ್ಣ(52) ಎಂಬುವವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಘಟನೆ ವಿವರ : ಬಸವಣ್ಣರವರು ತಮ್ಮ ಸ್ವಗ್ರಾಮ ತಗ್ಗಲೂರಿನಿಂದ ಹೆಂಡತಿಯ ತವರು ಮನೆಯಾದ ನಂಜನಗೂಡು ತಾಲ್ಲೂಕು ನಾಗಣಾಪುರ ಗ್ರಾಮಕ್ಕೆ ಬೆಳಿಗ್ಗೆ ತೆರಳುತ್ತಿದ್ದರು ಕುರುಬರಹುಂಡಿ ಬಳಿಯಿರುವ ಓಂಕಾರ್ ವಲಯ ಅರಣ್ಯ ಕಛೇರಿಯ ಬಳಿ ತೆರಳುತ್ತಿದ್ದಂತೆಯೇ ಎದುರುಗಡೆಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಲಾರಿಯ ಮುಂದಿನ ಚಕ್ರ ಕಿತ್ತುಹೊರಬಂದಿದೆ. ಅನತಿ ದೂರದಲ್ಲಿಯೇ ಇದ್ದ ಓಂಕಾರ್ ವಲಯ ಅರಣ್ಯ ಸಿಬ್ಬಂದಿಗಳು ಜೋರಾದ ಶಬ್ಧಕೇಳಿ ಬಂದು ನೋಡಲಾಗಿ ರಕ್ತದ ಮಡುವಿನಲ್ಲಿದ್ದ ಬಸವಣ್ಣನವರು ಸ್ಥಳದಲ್ಲೇ ಸಾವಿಗೀಡಾಗಿದ್ದರು ಲಾರಿಯಲ್ಲಿದ್ದ ಚಾಲಕ ಸೇರಿದಂತೆ ಇತರೆ ಇಬ್ಬರು ಪಕ್ಕದ ಕಾಡಿಗೆ ಪರಾರಿಯಾಗಿದ್ದು ನಂತರ ಬೇಗೂರು ಪೊಲೀಸ್‌ಠಾಣೆಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು ಸ್ಥಳಕ್ಕೆ ಪಿಎಸ್‌ಐ ಕಿರಣ್‌ಕುಮಾರ್ ಭೇಟಿನೀಡಿ ಪ್ರಕರಣ ದಾಖಲಿಸಿ 2 ವಾಹನಗಳನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ಸಾಗಿಸಿದರು.
ಆಕ್ರಂದನ : ವಿಷಯ ತಿಳಿಯುತ್ತಿದ್ದಂತೆಯೇ ನಾಗಣಾಪುರ ಹಾಗೂ ತಗ್ಗಲೂರು ಗ್ರಾಮಸ್ಥರುಗಳು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಹೆಡಿಯಾಲ-ಬೇಗೂರು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಡಿಕ್ಕಿಯ ರಭಸಕ್ಕೆ ಮೃತರು ಕಾರಿನಲ್ಲಿಯೇ ಸಿಕ್ಕಿಹಾಕಿಕೊಂಡು ಇವರನ್ನು ಹೊರತೆಗೆಯಲು ಒಂದು ಗಂಟೆಗಳಿಗೂ ಅಧಿಕ ಕಾಲ ಶ್ರಮಪಡುವಂತಾಗಿತ್ತು ಈ ಸಮಯದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟುವಂತಿತ್ತು. ಮೃತರಿಗೆ 2 ಗಂಡು 1 ಹೆಣ್ಣು ಹಾಗೂ ಪತ್ನಿ ಸೇರಿದಂತೆ ಅಪಾರ ಬಂಧು ಬಳಗಹೊಂದಿದ್ದು ಸ್ನೇಹಜೀವಿಯಾಗಿದ್ದ ಇವರು ಪ್ರಗತಿಪರ ಕೃಷಿಕರಾಗಿದ್ದರು.







