16ಕೆರೆಗಳ ಅಭಿವೃದ್ಧಿ 5 ಕೋಟಿ ವಿನಿಯೋಗ: ಸಚಿವ ಪ್ರಮೋದ್

ಉಡುಪಿ, ಎ.15: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 16 ಕೆರೆಗಳ ಅಭಿವೃದ್ಧಿಗೆ 5ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಳಕಾಡು ವಾರ್ಡ್ ವ್ಯಾಪ್ತಿಯ ಕಸ್ತೂರ್ಬಾ ನಗರದಲ್ಲಿರುವ ಮಜಲ್ ಕೆರೆಯನ್ನು 25ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತಿದ್ದರು.
ನಗರದಲ್ಲಿರುವ ಸಾಕಷ್ಟು ಕೆರೆಗಳನ್ನು ಮುಚ್ಚಿ ಅದರ ಮೇಲೆ ಮನೆ, ಕಟ್ಟಡ ಗಳನ್ನು ನಿರ್ಮಿಸಿರುವ ಪರಿಣಾಮ ಇಂದು ನೀರಿನ ಅಭಾವ ತಲೆದೋರಿದೆ. ಈಗ ನಾವು ಮತ್ತೆ ಕೆರೆಯನ್ನು ಅಭಿವೃದ್ಧಿ ಪಡಿಸಿ ಅಂತರ್ಜಲ ಮಟ್ಟವನ್ನು ಏರಿಸಿ ನೀರಿನ ಸಮಸ್ಯೆ ಪರಿಹರಿಸಬೇಕಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 10 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮತ್ತು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ನಗರಸಭೆ ವ್ಯಾಪ್ತಿ ಯಲ್ಲಿರುವ 16 ಕೆರೆಗಳ ಪೈಕಿ ಈಗಾಗಲೇ ಮಣ್ಣಪಳ್ಳ ಸಹಿತ ನಾಲ್ಕು ಕೆರೆಗಳನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 38 ಸೆಂಟ್ಸ್ ಜಾಗ ದಲ್ಲಿರುವ ಮಜಲ್ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಜೂನ್ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಶಾಂತರಾಮ್ ಸಾವಲ್ಕರ್, ಪ್ರಾಧಿಕಾರದ ಆಯುಕ್ತ ಜನಾರ್ದನ, ಸದಸ್ಯರಾದ ರಮೇಶ್ ಕಾಂಚನ್, ವಯಲೆಟ್ ಫಿಲಿಕ್ಸ್ ಡಿಸೋಜ, ಮಂಗ ಳೂರು ವಿವಿ ಸೆನೆಟ್ ಸದಸ್ಯ ಅಮೃತ್ ಶೆಣೈ, ಗುತ್ತಿಗೆದಾರ ರತ್ನಾಕರ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು. ಸ್ಥಳೀಯರಾದ ಪ್ರದೀಪ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







