ಮೀಸಲಾತಿ ಸಂವಿಧಾನಬದ್ಧ ಅಧಿಕಾರ, ಸಮಾನತೆಯ ಪ್ರಶ್ನೆ: ಫಣಿರಾಜ್

ಉಡುಪಿ, ಎ.15: ಮೀಸಲಾತಿಯು ಸಂವಿಧಾನ ಬದ್ಧ ಅಧಿಕಾರ, ಸಮಾ ನತೆಯ ಪ್ರಶ್ನೆಯೇ ಹೊರತು ಇನ್ನೊಬ್ಬರ ಅಧಿಕಾರ ಕಸಿಯುವ ಅಥವಾ ನೋವು ನೀಡುವ ನೀತಿಯಲ್ಲ. ಆದುದರಿಂದ ದಲಿತರನ್ನು ಶತ್ರುಗಳೆಂದು ಧ್ವೇಷಿಸದೆ ಅವರ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಚಿಂತಕ ಕೆ.ಫಣಿರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಅಜ್ಜರಕಾಡು ಪುರಭವನದ ಮಿನಿಹಾಲ್‌ನಲ್ಲಿ ಶನಿವಾರ ನಡೆದ ಡಾ.ಬಿ. ಆರ್.ಅಂಬೇಡ್ಕರ್ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಮೀಸಲಾತಿ ಬಗ್ಗೆ ಇಂದಿನ ಯುವಜನತೆಯಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅಂಬೇಡ್ಕರ್ ಪ್ರಕಾರ ಅದು ಮೀಸಲಾತಿಯಲ್ಲ. ದಲಿತರ ಜನಸಂಖ್ಯೆಗೆ ಅನು ಗುಣವಾಗಿ ದೊರೆಯಬೇಕಾದ ಅಧಿಕಾರದ ಹಕ್ಕು ಆಗಿದೆ. ದಲಿತರಿಗೆ ಕೆರೆ ಬಾವಿಯ ನೀರು ಕುಡಿಯುವುದಕ್ಕೆ ನಿರಾಕರಿಸುವ ಈ ಸಮಾಜ, ಅವರ ಹಕ್ಕನ್ನು ಪ್ರತಿಪಾದಿಸಲು ಬಿಡುತ್ತದೆಯೇ ಎಂದು ಪ್ರಶ್ನಿಸಿರುವ ಫಣಿರಾಜ್, ಆ ಕಾರಣ ಕ್ಕಾಗಿ ಮೀಸಲಾತಿ ಅಗತ್ಯ. ಮೀಸಲಾತಿ ಎಂಬುದು ಭಿಕ್ಷೆಯಲ್ಲ, ಅದು ದಲಿತರ ಹಕ್ಕು ಎಂದರು.
ಇಂದು ಕೃಷಿ ಕ್ಷೇತ್ರಕ್ಕಿಂತ ಸೇವಾ ಕ್ಷೇತ್ರ ಹೆಚ್ಚು ಆದಾಯ ನೀಡುತ್ತಿರುವ ಪರಿಣಾಮವಾಗಿ ಆರ್ಥಿಕ ಹಾಗೂ ಜಾತಿ ಅಸಮಾನತೆಯಲ್ಲಿಯೂ ಬಹಳಷ್ಟು ಪಲ್ಲಟಗಳಾಗಿವೆ. ಇಂದಿನ ಸಾಮಾಜಿಕ ನೀತಿಯಿಂದ ದಲಿತರು ಇನ್ನು ದಲಿತ ರಾಗಿಯೇ ಉಳಿದುಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಹಾಗೂ ಸೇವಾ ಕ್ಷೇತ್ರದಿಂದ ದಲಿತರು ವಂಚಿತರಾಗುತ್ತಿದ್ದಾರೆ. ನಮ್ಮಲ್ಲಿ ಭಾತೃತ್ವ ಮೂಡದೆ ಕೇವಲ ಸಂವಿ ಧಾನದಿಂದ ಮಾತ್ರ ನಮ್ಮನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಮಹಾಡ್ ಸತ್ಯಾಗ್ರಹ, ದಲಿತರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಮತ್ತು ಸಂವಿಧಾನ ರಚನೆಯ ಸಂದರ್ಭದಲ್ಲಿ ಪ್ರತ್ಯೇಕ ಹಕ್ಕಿನ ಮಂಡನೆಯ ತಿರಸ್ಕಾರವು ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಕಂಡ ಮೂರು ಮಹಾನ್ ಸೋಲು ಗಳಾಗಿವೆ ಎಂದ ಅವರು, ಹಿಂದೂಗಳು ಒಂದಾಗುವುದು ಜಾತಿ ನಾಶವಾಗಿ ಸಮಾನತೆ ಮೂಡಿದಾಗ ಮಾತ್ರ. ಅದು ಬಿಟ್ಟು ಇನ್ನೊಂದು ಧರ್ಮವನ್ನು ಧ್ವೇಷಿಸಲು, ಹಿಂಸಿಸಲು ಹಿಂದೂಗಳು ಒಂದಾಗುವುದು ಸರಿಯಲ್ಲ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಧಾರವಾಡ ಕರ್ನಾಟಕ ವಿವಿಯ ಸಿದ್ಧರಾಮ (ಪ್ರಥಮ), ರಾಯಚೂರು ಕೃಷಿ ವಿವಿಯ ಮೇಘರಾಜ್ ಮೈಸೂರಿ (ದ್ವಿತೀಯ), ಮಂಗಳೂರು ನಿಟ್ಟೆ ವಿವಿಯ ಸ್ನೇಹಾ ರವಿಚಂದ್ರ (ತೃತೀಯ) ಅವರಿಗೆ ಕ್ರಮವಾಗಿ 3000 ರೂ., 2000ರೂ., 1000ರೂ. ನಗದು ಬಹುಮಾನವನ್ನು ವಿತರಿಸಲಾಯಿತು.
ಉಪನ್ಯಾಸಕ ಪ್ರೊ.ವಿ.ಎಸ್.ಶ್ರೀಧರ್ ಉಪಸ್ಥಿತರಿದ್ದರು. ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಪದ ನಿಮಿತ್ತ ಸರಕಾರದ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು. ಉಡುಪಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ವಂದಿಸಿದರು.







