ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಗೆದ್ದ ಫಾರೂಕ್ ಅಬ್ದುಲ್ಲಾ

ಶ್ರೀನಗರ,ಎ.15: ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ)ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಆಡಳಿತ ಪಿಡಿಪಿ ಅಭ್ಯರ್ಥಿ ನಾಝಿರ್ ಖಾನ್ ಅವರನ್ನು 10,700ಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಶನಿವಾರ ಮತ ಎಣಿಕೆ ನಡೆದಿದ್ದು,ಅಬ್ದುಲ್ಲಾ ಅವರಿಗೆ 48,554 ಮತಗಳು ಮತ್ತು ಖಾನ್‌ಗೆ 37,779 ಮತಗಳು ಬಿದ್ದಿವೆ.ಎ.9ರಂದು ವ್ಯಾಪಕ ಹಿಂಸಾಚಾರದ ನಡುವೆಯೇ ಮತದಾನ ನಡೆದಿತ್ತು. ಅಂದು ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
ಶ್ರೀನಗರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಕನಿಷ್ಠವೆನ್ನಲಾದ ಶೇ.7.13ರಷ್ಟು ಮತದಾನವಾಗಿದ್ದು, ಎ.13ರಂದು 38 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗಿತು.್ತ
ಅಬ್ದುಲ್ಲಾ ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದು, ಅವರ ಗೆಲುವು ಆಡಳಿತ ಪಿಡಿಪಿಗೆ ಭಾರೀ ಹಿನ್ನಡೆ ಎಂದು ಪರಿಗಣಿಸಲಾಗಿದೆ.ಕಣದಲ್ಲಿ ಇತರ ಏಳು ಅಭ್ಯರ್ಥಿಗಳು ಇದ್ದರಾದರೂ ‘ನೋಟಾ’ಕ್ಕೆ ಮೂರನೇ ಸ್ಥಾನ (930 ಮತಗಳು)ಸಂದಿದೆ.
ಎ.9ರಂದು ಭದ್ರತಾ ಪಡೆಗಳ ಗೋಲಿಬಾರ್‌ನಲ್ಲಿ ಮೃತ ಎಂಟು ಯುವಕರ ಗೌರವಾರ್ಥ ಎನ್‌ಸಿ ಅಬ್ದುಲ್ಲಾರ ವಿಜಯೋತ್ಸವವನ್ನು ಆಚರಿಸಲಿಲ್ಲ.







