ಹೈಕಮಾಂಡ್ ಜೊತೆ ಮುಖ್ಯಮಂತ್ರಿ-ಪರಮೇಶ್ವರ್ ಚರ್ಚೆ
ಸಂಪುಟ ಸೇರ್ಪಡೆ-ವಿಧಾನಪರಿಷತ್‌ಗೆ ನೇಮಕ

ಹೊಸದಿಲ್ಲಿ, ಎ.15: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಕಾಂಗ್ರೆಸ್ ಹೈಕಮಾಂಡ್ ಅಭಿನಂದನೆ ಸಲ್ಲಿಸಿದೆ.
ಉಪಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಹೈಕಮಾಂಡ್ ಭೇಟಿಗೆ ಹೊಸದಿಲ್ಲಿಗೆ ತೆರಳಿರುವ ನಾಯಕರು, ಸಚಿವ ಸಂಪುಟದಲ್ಲಿ ಖಾಲಿಯಿರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವುದು ಹಾಗೂ ವಿಧಾನಪರಿಷತ್‌ಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ, ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿ ಅಹ್ಮದ್‌ಪಟೇಲ್‌ರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದಾಗ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಉಪಸ್ಥಿತರಿದ್ದರರು.
ಸಚಿವ ಸ್ಥಾನದ ಭರವಸೆ ನೀಡಿಲ್ಲ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಗೀತಾ ಮಹದೇವಪ್ರಸಾದ್‌ರನ್ನು ಸಚಿವರನ್ನಾಗಿ ಮಾಡುವ ಭರವಸೆಯನ್ನು ನಾನು ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ರೀತಿಯ ಭರವಸೆಗಳನ್ನು ನೀಡುವುದು ಯಡಿಯೂರಪ್ಪ ಮಾತ್ರ. ನಾನು ಆ ರೀತಿ ಮಾಡುವುದಿಲ್ಲ ಎಂದರು.
ಉಪ ಚುನಾವಣೆಯ ಕುರಿತು ಹೈಕಮಾಂಡ್‌ಗೆ ವಿವರಣೆ ನೀಡಿದ್ದೇವೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟಕ್ಕೆ ಇಬ್ಬರನ್ನು ಸೇರ್ಪಡೆ ಮಾಡಿಕೊಳ್ಳುವ ವಿಚಾರವನ್ನು ಈಗ ಚರ್ಚೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಕೇವಲ ವಿಧಾನಪರಿಷತ್‌ಗೆ ಮೂವರನ್ನು ನಾಮನಿರ್ದೇಶನ ಮಾಡುವ ಕುರಿತು ಮಾತ್ರ ಮಾತುಕತೆ ನಡೆಸಿದ್ದೇವೆ. ಅರ್ಹರ ಹೆಸರಿನ ಪಟ್ಟಿಯನ್ನು ಈ ಹಿಂದೆಯೆ ಹೈಕಮಾಂಡ್‌ಗೆ ಸಲ್ಲಿಸಿದ್ದೇವೆ. ಈಗಾಗಲೆ ಸಾಕಷ್ಟು ತಡವಾಗಿದ್ದು, ಆದಷ್ಟು ಶೀಘ್ರದಲ್ಲೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಡಾ.ಚಲ್ಲಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







