ಪಾಕಿಸ್ತಾನ ಇಸ್ಲಾಮಿಗೆ ಕೆಟ್ಟಹೆಸರು ತರುತ್ತಿದೆ :ಮಲಾಲಾ

ಹೊಸದಿಲ್ಲಿ,ಎ. 15: ಪಾಕಿಸ್ತಾನಿಗಳ ಕೆಲವು ವರ್ತನೆಗಳು ದೇಶಕ್ಕೆ ಮತ್ತು ಇಸ್ಲಾಮಿಗೆ ಕೆಟ್ಟ ಹೆಸರು ತರುತ್ತಿದೆ ಎಂದು ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ಹೇಳಿದ್ದಾರೆ. ದೇವನಿಂದೆ ಆರೋಪಿಸಿ ವಿದ್ಯಾರ್ಥಿಯೊಬ್ಬನನ್ನು ಜನರ ಗುಂಪು ಥಳಿಸಿ ಕೊಂದ ಘಟನೆಯ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು. ಘಟನೆಯ ನಂತರ ವೀಡಿಯೊ ಸಂದೇಶದಲ್ಲಿ ಮಲಾಲಾ ಈವಿಷಯವನ್ನು ಹೇಳಿದ್ದಾರೆ.
ಜಗತ್ತಿನ ಮುಂದೆ ದೇಶಕ್ಕೆ ಮತ್ತು ಇಸ್ಲಾಮಿಗೆ ಕೆಟ್ಟ ಹೆಸರು ಬರಲು ಇಂತಹ ಘಟನೆಗಳು ಕಾರಣವಾಗುತ್ತಿದೆ. ಇಸ್ಲಾಮಿನ ವಿರುದ್ಧ ಆಕ್ಷೇಪಿಸಲು ಅವಕಾಶ ಮಾಡಿಕೊಟ್ಟ ನಮಗೆ, ಧರ್ಮದ ವಿರುದ್ಧ ನಡೆಸಲಾಗುವ ತಾರತಮ್ಯದ ಕುರಿತು ಹೇಗೆ ಮಾತನಾಡಲು ಸಾಧ್ಯ. ದೇಶಕ್ಕೂ ಧರ್ಮಕ್ಕೂ ವಿರುದ್ಧವಾಗಿ ನಾವೇ ವರ್ತಿಸುತ್ತಿದ್ದೇವೆ ಎಂದು ಮಲಾಲಾ ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ ಮಂಗಳವಾರ ಇಪ್ಪತ್ತಮೂರು ವರ್ಷದ ಮಾಶಾಲ್ ಖಾನ್ ಎಂಬ ವಿದ್ಯಾರ್ಥಿಯನ್ನು ಜನರ ಗುಂಪೊಂದು ಥಳಿಸಿಕೊಂದಿತ್ತು. ಫೇಸ್‌ಬುಕ್‌ನಲ್ಲಿ ಧರ್ಮವನ್ನು ಆತ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದಾನೆ ಎಂದು ಆರೋಪಿಸಿ ಗುಂಪುದಾಳಿಮಾಡಿತ್ತು. ಮಾಶಾಲ್‌ನನ್ನು ಕೊಲೆಗೈದು ಮೃತದೇಹಕ್ಕೆ ಹೊಡೆಯುವ ದೃಶ್ಯಗಳು ಸೋಶಿಯಲ್ ಮೀಡಿಯಗಳಲ್ಲಿ ಪ್ರಸಾರವಾಗಿತ್ತು.
ಮೃತ ವಿದ್ಯಾರ್ಥಿಯ ಕುಟುಂಬದ ಜೊತೆ ಮಾತನಾಡಿದ್ದೇನೆ. ಅವರು ದುಃಖದ ಮಡುವಿನಲ್ಲಿಮುಳುಗಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಮಲಾಲಾ ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.