ಸಾಧಕರನ್ನು ಗುರುತಿಸುವುದು ಸಮಾಜದ ಜವಾಬ್ದಾರಿ: ಪ್ರಮೋದ್
‘ಗಲ್ಫ್ ಕನ್ನಡಿಗ ಬಿ.ಜಿ.ಮೋಹನದಾಸ್’ ಕೃತಿ ಅನಾವರಣ

ಉಡುಪಿ, ಎ.15: ಸಾಧಕರನ್ನು ಗುರುತಿಸುವುದು ಸಮಾಜದ ಬಹುದೊಡ್ಡ ಜವಾಬ್ದಾರಿಯಾಗಿದೆ. ಇದರಿಂದ ಉಳಿದವರಿಗೂ ಸ್ಪೂರ್ತಿ ದೊರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯ ಸುಹಾಸಂ ಸಂಸ್ಥೆಯ ವಿಂಶತಿ ಸರಣಿಯ ಕಾರ್ಯಕ್ರಮದ ಭಾಗವಾಗಿ ನಗರದ ಹೊಟೇಲ್ ಕಿದಿಯೂರಿನ ಮಹಾಜನ ಹಾಲ್‌ನಲ್ಲಿ ಶನಿವಾರ ‘ಗಲ್ಫ್ ಕನ್ನಡಿಗ ಬಿ.ಜಿ.ಮೋಹನದಾಸ್’ ಕೃತಿ ಅನಾವರಣ ಹಾಗೂ ಬಿ.ಜಿ.ಮೋಹನದಾಸ್ ದಂಪತಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ ಕನ್ನಡಿಗರ ಪಾಲಿಗೆ ಹಾಗೂ ಅಲ್ಲಿಗೆ ಭೇಟಿ ನೀಡುವ ಕರಾವಳಿಗರಿಗೂ ಅವರು ಬಿಜಿ ಆಪದ್ಭಾಂಧವರಂತಿದ್ದರು ಎಂದು, ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಹಿರಿಯ ಸಾಹಿತಿ ಹಾಗೂ ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಅವರು ಮಾತನಾಡಿ ಗ್ರಾಮೀಣ ಪ್ರದೇಶವಾದ ಕಾಂತಾವರದಲ್ಲಿ ಜನರ ದೇಣಿಗೆಯ ಮೂಲಕ ಕನ್ನಡ ಭವನ ಹಾಗೂ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಕರಾವಳಿ ಮೂರು ಜಿಲ್ಲೆಗಳ 180ಕ್ಕೂ ಅಧಿಕ ಮಂದಿಯನ್ನು ಪರಿಚಯಿಸಲಾಗಿದೆ. ಆದರೆ ನಮ್ಮ ಕಾರ್ಯಚಟುವಟಿಕೆಗಳ ಕುರಿತಂತೆ ರಾಜ್ಯ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧೋರಣೆ ತೀವ್ರ ನಿರಾಶೆ ಹಾಗೂ ನೋವು ತರುವಂತದ್ದಾಗಿದೆ ಎಂದರು.
ಪುಸ್ತಕ ಪ್ರಕಟಣೆ ಎಂಬುದು ಇಂದು ಅತ್ಯಂತ ಕಷ್ಟದ ಪ್ರತಿಫಲಾಪೇಕ್ಷೆ ಇಲ್ಲದ ಕಾರ್ಯವಾಗಿದೆ. ಈ ಬಾರಿ ನಮಗೆ ಸರಕಾರದ ಅನುದಾನವನ್ನು ನಿರಾಕರಿಸಲಾಗಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಷ್ಠಾವಂತಿಕೆ ಯಿಂದ ಕನ್ನಡ ಕಾಯಕದಲ್ಲಿ ನಿರತವಾಗಿರುವ ತಮ್ಮಂಥ ಸಂಸ್ಥೆಗೆ ಸಹಾಯ ಮಾಡಿ ಎಂದು ಸಚಿವ ಪ್ರಮೋದ್‌ರಿಗೆ ಮನವಿ ಮಾಡಿದರು.
ಸಮಾರಂಭದಲ್ಲಿ ಬಿ.ಜಿ.ಮೋಹನದಾಸ್ ದಂಪತಿಗಳನ್ನು ಆಸ್ಕರ್ ಫೆರ್ನಾಂಡೀಸ್ ಅಭಿನಂದಿಸಿದರು. ಬ್ಲೋಸಮ್ ಫೆರ್ನಾಂಡೀಸ್, ಹಿರಿಯ ಪತ್ರಕರ್ತ ಎನ್.ಗುರುರಾಜ್ ಉಪಸ್ಥಿತರಿದ್ದರು.
ಸುಹಾಸಂನ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಅತಿಥಿಗಳನ್ನು ಸ್ವಾಗತಿಸಿದರೆ, ಕಾರ್ಯದರ್ಶಿ ಎಚ್.ಗೋಪಾಲ ಭಟ್ಟ (ಕು.ಗೋ.) ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತಿ ಅಂಶುಮಾಲಿ ಪುಸ್ತಕವನ್ನು ಪರಿಚಯಿಸಿದರು.







