ಐಐಟಿಯಲ್ಲಿ ಮಹಿಳೆಯರಿಗಾಗಿ ಹೆಚ್ಚುವರಿ ಸೀಟುಗಳು
2018ರಿಂದ ಜಾರಿ

►ಲಿಂಗ ಅಸಮತೋಲನ ತಡೆಗೆ ಕ್ರಮ
ಹೊಸದಿಲ್ಲಿ,ಎ.15: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ಅಸಮತೋಲನವನ್ನು ಸರಿಪಡಿಸುವ ಕೇಂದ್ರ ಸರಕಾರದ ಪ್ರಯತ್ನವಾಗಿ ಭಾರತೀಯ ತಂತ್ರಜ್ಞಾನ (ಐಐಟಿ) ಸಂಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚುವರಿ ಸ್ಥಾನಗಳನ್ನು ನೀಡಲು ಶನಿವಾರ ನಿರ್ಧರಿಸಲಾಗಿದೆ.
ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣವು ಶೇ.20ರಷ್ಟು ತಲುಪುವ ವರೆಗೂ ಮಹಿಳಾ ಮೀಸಲಾತಿ ಸೀಟುಗಳ ಸಂಖ್ಯೆಯನ್ನು ಪ್ರತಿ ವರ್ಷವೂ ಹೆಚ್ಚಿಸಲು ಇಂದು ನಡೆದ ಐಐಟಿಯ ಜಂಟಿ ಪ್ರವೇಶಾತಿ ನಿಗಮ (ಜೆಎಬಿ)ದ ಸಭೆಯು ನಿರ್ಧರಿಸಿದೆ.
‘‘ ಒಂದು ವೇಳೆ ಮಹಿಳಾ ಅಭ್ಯರ್ಥಿಯು ಸಾಮಾನ್ಯ ಶ್ರೇಣಿಯ ಮೂಲಕ ಐಐಟಿಗೆ ಸೇರ್ಪಡೆಗೊಳ್ಳಲು ವಿಫಲಳಾದಲ್ಲಿ ಆಕೆಗೆ ಸಂಖ್ಯಾತ್ಮಕ ಮೀಸಲಾತಿ ಮೂಲಕ ಪ್ರವೇಶಾತಿಯನ್ನು ಒದಗಿಸಲಾಗುವುದೆಂದು ಮಹಿಳಾ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹೆಚ್ಚಳವು ಈಗ ಅಸ್ತಿತ್ವದಲ್ಲಿರುವ ಪುರುಷ ಅಭ್ಯರ್ಥಿಗಳ ಸೀಟುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಲಾರದು ಹಾಗೂ ಮಂಬರುವ ಗರಿಷ್ಠ ಎಂಟು ವರ್ಷಗಳವರೆಗೆ ಈ ಬದಲಾವಣೆಯನ್ನು ಜಾರಿಗೆ ತರಲಾಗುವುದು ಎಂದರು. ಜೆಇಇ- ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಿಳಾ ಅಭ್ಯರ್ಥಿಗಳ ಮೂಲಕ ಈ ಶೇ.20ರಷ್ಟು ಸಂಖ್ಯಾತ್ಮಕ ಮೀಸಲಾತಿ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಐಐಟಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಮಹಿಳೆಯರಿಗಾಗಿನ ಹೆಚ್ಚುವರಿ ಸೀಟುಗಳ ಸಂಖ್ಯೆಯನ್ನು ಶೇ.14ಕ್ಕೇರಿಸಲಾಗಿದೆ. ಮಹಿಳಾ ವಿದ್ಯಾರ್ಥಿನಿಯರು ತೆರವುಗೊಳಿಸಿದ ಸೀಟುಗಳನ್ನು ಮಹಿಳಾ ಅಭ್ಯರ್ಥಿಗಳ ಮೂಲಕವೇ ಭರ್ತಿ ಮಾಡಲಾಗುವುದು ಎಂದರು.
ಈ ಕ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಐಐಟಿಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆಯೆಂಬ ಭರವಸೆಯನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ. 2015ರಲ್ಲಿ ಐಐಟಿಗೆ ಸೇರ್ಪಡೆಗೊಂಡ ಮಹಿಳೆಯರ ಸಂಖ್ಯೆ ಶೇ.9ರಷ್ಟಾಗಿತ್ತಾದರೆ, 2016ರಲ್ಲಿ ಅದು ಶೇ.8ಕ್ಕಿಳಿದಿತ್ತು.







