ಧೋನಿ ಪರ ಸೆಹ್ವಾಗ್ ಬ್ಯಾಟಿಂಗ್

ಹೊಸದಿಲ್ಲಿ, ಎ.15: ಇದೀಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಫಾರ್ಮ್ ಕಳೆದುಕೊಂಡಿದ್ದಾರೆಂಬ ಕಾರಣಕ್ಕಾಗಿ ಅವರ ಬ್ಯಾಟಿಂಗ್ ಸಾಮರ್ಥ್ಯ ಮುಗಿದಿದೆ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಐಪಿಎಲ್‌ನ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ಈ ಆವೃತ್ತಿಯ ಐಪಿಎಲ್‌ನ ನಾಲ್ಕು ಪಂದ್ಯಗಳಲ್ಲಿ ಔಟಾಗದೆ 12,5, 11 ಮತ್ತು 5 ರನ್ ಸೇರಿದಂತೆ ಒಟ್ಟು 33 ರನ್ ಸಂಪಾದಿಸಿದ್ದಾರೆ. ಧೋನಿ ಫಾರ್ಮ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಧೋನಿ ಕಳಪೆ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆಹ್ವಾಗ್ ‘‘ ಧೋನಿ ಈಗ ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ಧಾರೆ. 5 ಅಥವಾ 6ನೆ ಕ್ರಮಾಂಕದಲ್ಲಿ ಅವರು ಚೆನ್ನಾಗಿ ಬ್ಯಾಟ್ ಮಾಡಲು ಸಮರ್ಥರು. ಸ್ವಲ್ಪ ದಿನ ತಾಳ್ಮೆಯಿಂದ ಕಾದು ನೋಡಿ. ಅವರು ಬೇಗನೆ ಫಾರ್ಮ್ ಕಂಡುಕೊಳ್ಳಲಿದ್ದಾರೆಂಬ ವಿಶ್ವಾಸ ನನಗಿದೆ’’ ಎಂದು ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಶತಕ ದಾಖಲಿಸಿರುವುದನ್ನು ನೆನಪಿಸಿಕೊಂಡ ಸೆಹ್ವಾಗ್ ಅವರು ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಧೋನಿ ಇಲ್ಲದ ಭಾರತ ತಂಡವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ಅವರು ಚಾಂಪಿಯನ್ಸ್‌ಗೆ ಭಾರತದ ಕ್ರಿಕೆಟ್ ತಂಡದಲ್ಲಿ ಆಡುವುದು ಖಚಿತ’’ ಎಂದರು.







