ಉಡುಪಿಯಲ್ಲಿ ಸಂಭ್ರಮದ ಪಾಸ್ಕ ಜಾಗರಣೆ

ಉಡುಪಿ, ಎ.15: ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆ(ಈಸ್ಟರ್ ವಿಜಿಲ್)ಯು ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತದ ಪಾಸ್ಕ ಜಾಗರಣೆಯ ಪ್ರಧಾನ ಕಾರ್ಯಕ್ರಮ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ನಡೆಯಿತು. ಧರ್ಮಾ ಧ್ಯಕ್ಷರು ಹೊಸ ಬೆಂಕಿಯನ್ನು ಆಶೀರ್ವದಿಸುವ ಮೂಲಕ ಪಾಸ್ಕ ಜಾಗರಣೆಯ ಧಾರ್ಮಿ ವಿಧಿವಿಧಾನಗಳು ಆರಂಭಗೊಂಡವು.
ಆಶೀರ್ವದಿಸಿದ ಹೊಸ ಬೆಂಕಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚಿನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸ ಲಾಯಿತು. ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು. ಧರ್ಮಾಧ್ಯಕ್ಷರು ಮತ್ತು ಧರ್ಮಗುರುಗಳು ಹೊಸ ನೀರಿನ ಆಶೀರ್ವಚನ ನೆರವೇರಿಸಿ ನೆರೆದ ಭಕ್ತಾಧಿಗಳ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿ ಆಶೀರ್ವದಿಸಿದರು.
ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ಧರ್ಮಗುರುಗಳು ವಿವರಿಸಿದರು. ಅಲ್ಲದೆ ಕ್ರೈಸ್ತ ವಿಶ್ವಾಸ, ಸತ್ಯದ ಮರು ಧೃಡೀಕರಣ ನಡೆಸಲಾಯಿತು. ಸಂಭ್ರಮದ ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೈಸ್ತ ಭಾಂಧವರು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.





