ಕೇಂದ್ರದಿಂದ ದಲಿತರ ಹಕ್ಕುಗಳ ದಮನ: ಸುಭಾಷಿಣಿ ಅಲಿ
ದಲಿತರ ರಾಜ್ಯಮಟ್ಟದ ಬೃಹತ್ ಸಮಾವೇಶಕ್ಕೆ ಚಾಲನೆ

ಬಳ್ಳಾರಿ, ಎ.15: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರವು, ಎಲ್ಲ ಎಸ್ಸಿ-ಎಸ್ಟಿ ಸವಲತ್ತುಗಳನ್ನು ರದ್ದು ಮಾಡಿದೆ. ದೇವದಾಸಿ ಮಹಿಳೆಯರಿಗೆ ಭೂಮಿ, ಪಿಂಚಣಿ, ಮನೆ ಕೊಡಿಸಲು ಸಾಕಷ್ಟು ಹೋರಾಟ, ಚಳವಳಿ ನಡೆಯಬೇಕಿದೆ ಎಂದು ಮಾಜಿ ಸಂಸದೆ ಮತ್ತು ಡಾ.ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಮಗಳು ಸುಭಾಷಿಣಿ ಅಲಿ ಕರೆ ನೀಡಿದ್ದಾರೆ.
ಶನಿವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯು ಆಯೋಜಿಸಿದ ದಲಿತರ ರಾಜ್ಯಮಟ್ಟದ ಬೃಹತ್ ಬಹಿರಂಗ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕೋಮುವಾದಿ ಸರಕಾರ ಅಧಿಕಾರದಲ್ಲಿರುವುದರಿಂದ ನಮ್ಮ ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ದಲಿತರ ಶ್ರೇಯೋಭಿವೃದ್ಧಿಗಾಗಿ ಕಲ್ಪಿಸಲಾಗಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಸುಭಾಷಿಣಿ ಅಲಿ ಕಿಡಿಗಾರಿದರು.
ಅಂಬೇಡ್ಕರ್ ತತ್ವ, ಸಿದ್ಧಾಂತವನ್ನು ವರ್ಷಕೊಮ್ಮೆ ಆಚರಣೆ ಮಾಡುವವರು ಬೇಕಾ, ಅಥವಾ ಅಂಬೇಡ್ಕರ್ ತತ್ವ, ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನರ ಜತೆಗೆ ನಿಲ್ಲುವ ನಾಯಕರು ಬೇಕಾ ಎಂಬುದನ್ನು ಜನರು ತಿರ್ಮಾನಿಸಲಿ ಎಂದು ಅವರು ಹೇಳಿದರು.
ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಮಿತಿಗಳು ಇವೆ. ಆದರೆ, ಅವು ಏನು ಕೆಲಸ ಮಾಡುತ್ತಿಲ್ಲ. ಇಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳಿ ದಲಿತರ ಮೇಲೆ ಇನ್ನೂ ದೌರ್ಜನ್ಯ ನಡೆಯುತ್ತಿದೆ ಎಂದು ಸುಭಾಷಿಣಿ ಅಲಿ ಹೇಳಿದರು.
ದಲಿತರಲ್ಲಿ ಬಹು ಮುಖ್ಯವಾಗಿ ಶೋಷಣೆಗೆ ಒಳಗಾಗುವವರು ಮೊದಲು ಹೆಣ್ಣು ಮಕ್ಕಳು. ಅದರಲ್ಲೂ ದೇವದಾಸಿ ಹೆಣ್ಣುಮಕ್ಕಳು ಸಾಕಷ್ಟು ಶೋಷಣೆಗೆ ಒಳಗಾಗುತ್ತಿ ದ್ದಾರೆ. ಇಂದು ದೇವರ ಹೆಸರಲ್ಲಿ ದೇವದಾಸಿ ಪದ್ಧತಿ ನಡೆಯುತ್ತಿದೆ. ಇಂದು ಬ್ರಾಹ್ಮಣ ಸಮುದಾಯದಲ್ಲಿ ದೇವದಾಸಿಯರಿಲ್ಲ. ಆದರೆ ದಲಿತ ಸಮುದಾಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇವದಾಸಿಯರಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹುಲಿಗೆಮ್ಮ, ಮಾರೆಮ್ಮ, ಎಲ್ಲಮ್ಮ ದೇವಿಯ ಹೆಸರುಗಳಲ್ಲಿ ಈ ಪದ್ದತಿಯನ್ನು ನಡೆಸುತ್ತಾರೆ. ಊರಿನ ಹಿರಿಯ ಮುಖಂಡರ ಆಸೆಗಳಿಗೆ ಹೆಣ್ಣು ಮಕ್ಕಳನ್ನು ಬಲಿ ಮಾಡಲಾಗುತ್ತಿದೆ. ಅವರ ದೇಹಕ್ಕೆ ಅವರ ಮೇಲೆ ಹಕ್ಕಿಲ್ಲದ ಹಾಗೆ ನೋಡಿಕೊಳ್ಳುವುದು ದುರಂತ ಎಂದು ಸುಭಾಷಿಣಿ ಅಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಹುಲಿಗೆಮ್ಮ ಎಂಬ ದೊಡ್ಡ ದೇವರಿದೆ. ಸಾಕಷ್ಟು ಪ್ರಮಾಣದಲ್ಲಿ ದೇವದಾಸಿ ಪದ್ಧತಿ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಹೋಬಳಿಯ ಬಾದನಟ್ಟಿ ಗ್ರಾಮದ ದೇವದಾಸಿ ಮಹಿಳೆ ಎಂಕಮ್ಮ ತನ್ನ ಮೊಮ್ಮಗಳಿಗೆ ಮುತ್ತು ಕಟ್ಟುವ ಕೆಲಸಕ್ಕೆ ವಿರೋಧ ಮಾಡಿ ಇಂದಿಗೂ ಆ ಊರಿನ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೂ ಅವರ ಹೋರಾಟ ಮುಂದುವರೆದಿದೆ. ಇಂತಹ ದಿಟ್ಟ ಹೋರಾಟಕ್ಕೆ ಬೆಂಬಲ ನೀಡಬೇಕಿದೆ ಎಂದು ಸುಭಾಷಿಣಿ ಅಲಿ ಕರೆ ನೀಡಿದರು.
ಸಮಾವೇಶದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಮುಖಂಡರಾದ ಎಸ್.ವೈ.ಗುರುಶಾಂತ್, ನಿತ್ಯಾನಂದ ಸ್ವಾಮಿ, ಯು.ಬಸವರಾಜ್, ಆರ್.ಎಸ್.ಬಸವರಾಜ್, ಮಾಳಮ್ಮ, ಕೆ.ನಾಗರತ್ನಮ್ಮ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.







