ಸ್ತ್ರೀ-ಪುರುಷರು ಪರಸ್ಪರರ ಹಕ್ಕು ಬಾಧ್ಯತೆಗಳನ್ನು ಅರಿತುಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ: ಅಕ್ಬರ್ ಅಲಿ

ಮಂಗಳೂರು,ಎ.15: ಪುರುಷ ಮತ್ತು ಮಹಿಳೆಯರು ಮಾನವ ಪರಿವಾರದ ಎರಡು ಅವಿಭಾಜ್ಯ ಅಂಗವಾಗಿದ್ದು, ಪರಸ್ಪರರ ಹಕ್ಕು ಬಾಧ್ಯತೆಗಳನ್ನು ಅರಿತುಕೊಂಡು ಅನ್ಯೋನ್ಯತೆಯಿಂದ ಬಾಳಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕರ್ನಾಟಕ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸಲಹಾ ಸಮಿತಿಯ ಸದಸ್ಯರಾದ ಅಕ್ಬರ್ ಅಲಿ ಉಡುಪಿ ಅಭಿಪ್ರಾಯಿಸಿದರು.
ಅವರು ಇಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ಮೂರು ದಿನಗಳ ಕಾಲ ಆಯೋಜಿಸಿರುವ ಸಾರ್ವಜನಿಕ ಕುರ್ ಆನ್ ಪ್ರವಚನದಲ್ಲಿ `ಮಹಿಳೆಯರ ಹಕ್ಕು ಮತ್ತು ಸ್ಥಾನಮಾನ' ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು.
ಮಹಿಳೆಯರ ನೈಜ ಸ್ಥಾನಮಾನವನ್ನು ಪರಿಗಣಿಸದೆ, ಅವಳನ್ನು ಮಾರುಕಟ್ಟೆಯ ಸರಕಾಗಿಸುವಲ್ಲಿ ಬಂಡವಾಳಶಾಹಿಗಳು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದಿಂದ ಇಂದು ಮಹಿಳೆಯರು ಶೋಷಿತರಾಗುತ್ತಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಗ್ರಂಥಾಲಯದ ಡೆಪ್ಯುಟಿ ಲೈಬ್ರೆರಿಯನ್ ಡಾ.ಟಿ.ವೈ.ಮಲ್ಲಯ್ಯ ಹಾಗೂ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಅಧ್ಯಕ್ಷ ಎ.ಎಚ್. ಮಹ್ಮೂದ್, ಕಾರ್ಯಕ್ರಮ ಸಂಚಾಲಕ ಅಬ್ದುಲ್ ರಹೀಂ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಕಾರ್ಯದರ್ಶಿ ಅಬ್ದುಲ್ ಕರೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿದರು.







