ದಲಿತರಿಗೆ ಸ್ವಾತಂತ್ರದ ಸಿಪ್ಪೆ ನೀಡಿ, ತಿರುಳನ್ನು ವಂಚಿಸಲಾಗುತ್ತಿದೆ: ಲೇಖಕಿ ಡಾ.ಅನುಪಮಾ
ಬಳ್ಳಾರಿ, ಎ. 15: ದಲಿತರಿಗೆ ಸ್ವಾತಂತ್ರ್ಯ ಎಂಬ ಸಿಪ್ಪೆಯನ್ನು ಮಾತ್ರ ತೋರಿಸಲಾಗುತ್ತಿದೆಯೇ ಹೊರತು, ಅದರ ನಿಜವಾದ ತಿರುಳು ಇಂದಿಗೂ ಸಿಕ್ಕಿಲ್ಲ. ಇದು ಹೀಗೆಯೇ ಮುಂದುವರಿದರೆ ಇನ್ನೂ 200ವರ್ಷ ಮೀಸಲಾತಿ ನೀಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಲೇಖಕಿ ಡಾ.ಎಚ್.ಎಸ್.ಅನುಪಮಾ ಎಚ್ಚರಿಸಿದ್ದಾರೆ.
ಶುಕ್ರವಾರ ಸಂಜೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರಿಗೆ ಕೇವಲ ರಾಜಕೀಯ ಮೀಸಲಾತಿ ನೀಡಿ ವಂಚಿಸಲಾಗುತ್ತಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ದೇಶದ ಪವಿತ್ರ ಗ್ರಂಥ ಎಂದು ವಿಶ್ಲೇಷಿಸಿದರು. ಪರಿಶಿಷ್ಟರು ಸಂಘ ಮತ್ತು ಸಾಂಕವಾಗಿ ಒಡೆದುಹೋಗಿದ್ದು, ಅವರನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಮಾತನಾಡಿ, ಅಂಬೇಡ್ಕರ್ ಅವರು ಭಾರತ ರತ್ನ ಮಾತ್ರವಲ್ಲ, ಅವರು ವಿಶ್ವರತ್ನ. ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು. ಅವರು ನಮಗೆ ಕಲ್ಪಿಸಲಾಗಿರುವ ಸಂವಿಧಾನದಿಂದಲೇ ನಮ್ಮಂತ ಸಾಮಾನ್ಯ ವ್ಯಕ್ತಿಯೂ ಜಿಲ್ಲಾಧಿಕಾರಿಯಂತ ಉನ್ನತ ಹುದ್ದೆಗೇರಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಶಾಸಕ ಅನಿಲ್ ಲಾಡ್, ಮೇಯರ್ ವೆಂಕಟರಮಣ, ಜಿಪಂ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಮಂಜುನಾಥ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರಿಮಲ್ಲಪ್ಪ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಆರ್.ಚೇತನ್ ಹಾಜರಿದ್ದರು.







