ಉದ್ವಿಗ್ನತೆಯನ್ನು ಹೆಚ್ಚಿಸಬೇಡಿ ಅಮೆರಿಕ, ಉತ್ತರ ಕೊರಿಯಕ್ಕೆ ಚೀನಾ ಎಚ್ಚರಿಕೆ
.jpg)
ಬೀಜಿಂಗ್, ಎ. 15: ನಿಮ್ಮ ವೈರತ್ವವನ್ನು ಹಿಂದಕ್ಕೆ ಪಡೆಯಲಾಗದ ಹಂತಕ್ಕೆ ಒಯ್ಯಬೇಡಿ ಹಾಗೂ ಕೊರಿಯ ಪರ್ಯಾಯ ದ್ವೀಪದಲ್ಲಿ ಯುದ್ಧ ಸ್ಫೋಟಗೊಳ್ಳಲು ಅವಕಾಶ ಮಾಡಿಕೊಡಬೇಡಿ ಎಂದು ಚೀನಾ ಶುಕ್ರವಾರ ಅಮೆರಿಕ ಮತ್ತು ಉತ್ತರ ಕೊರಿಯಗಳಿಗೆ ಕಟು ಎಚ್ಚರಿಕೆ ನೀಡಿದೆ.
ಯುದ್ಧದ ಕಾರ್ಮೋಡ ಕವಿಯುತ್ತಿದೆ ಎಂಬುದಾಗಿ ಚೀನಾದ ವಿದೇಶ ಸಚಿವ ವಾಂಗ್ ಯಿ ಹೇಳಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಅಮೆರಿಕ ಕೊರಿಯ ಪರ್ಯಾಯ ದ್ವೀಪದಲ್ಲಿ ತನ್ನ ನೌಕಾ ಪಡೆಯನ್ನು ಜಮಾಯಿಸಿರುವುದು ಹಾಗೂ ಉತ್ತರ ಕೊರಿಯ ನೂತನ ಪರಮಾಣು ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎನ್ನುವ ಊಹಾಪೋಹಗಳ ಹಿನ್ನೆಲೆಯಲ್ಲಿ ಸ್ಫೋಟಕ ಪರಿಸ್ಥಿತಿ ನೆಲೆಸಿದೆ.
ಅದೇ ವೇಳೆ, ಅಮೆರಿಕದ ಸೇನೆಯು ದಕ್ಷಿಣ ಕೊರಿಯದ ಸೇನೆಯ ಜೊತೆಗೆ ಜಂಟಿ ಯುದ್ಧಾಭ್ಯಾಸವನ್ನೂ ನಡೆಸುತ್ತಿದೆ. ಉತ್ತರ ಕೊರಿಯ ಇದನ್ನು ಪ್ರಚೋದನೆ ಎಂಬುದಾಗಿ ಪರಿಗಣಿಸಿದೆ.
‘‘ಅಮೆರಿಕ ಮತ್ತು ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯಗಳು ಮುಯ್ಯಿಗೆ ಮುಯ್ಯಿ ಕೃತ್ಯದಲ್ಲಿ ತೊಡಗಿವೆ. ಖಡ್ಗಗಳನ್ನು ಹೊರಗೆಳೆಯಲಾಗಿದೆ ಹಾಗೂ ಬಾಣಗಳನ್ನು ಚೂಪುಗೊಳಿಸಲಾಗುತ್ತಿದೆ’’ ಎಂದು ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಂಗ್ ಹೇಳಿದರು.







