ಬಾಂಬ್ ನಾಗನ ಪತ್ತೆಗೆ ವಿಶೇಷ ಪೊಲೀಸ್ ತಂಡ

ಬೆಂಗಳೂರು, ಎ.15: ಅಪಹರಣ, ಸುಲಿಗೆ, ಹಳೆ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮಾಜಿ ಬಿಬಿಎಂಪಿ ಸದಸ್ಯ ವಿ.ನಾಗರಾಜ್ ಯಾನೆ ಬಾಂಬ್ ನಾಗನ ಹೆಸರನ್ನು ಮತ್ತೆ ರೌಡಿಪಟ್ಟಿಗೆ ಸೇರಿಸಲಾಗಿದ್ದು, ಈತನ ಪತ್ತೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ನಾಲ್ಕು ವಿಶೇಷ ಪೊಲೀಸ್ ತಂಡಗಳು ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ತುಮಕೂರು ಹಾಗೂ ಬೆಂಗಳೂರು ನಗರ ಸೇರಿ ಇನ್ನಿತರೆ ಕಡೆ ಬಾಂಬ್ ನಾಗನಿಗಾಗಿ ಶೋಧ ನಡೆಸುತ್ತಿದ್ದು, ಆತನ ಆಪ್ತರ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆರೋಪಿ ನಾಗನ ಮನೆ ಮತ್ತು ಕಚೇರಿಯಲ್ಲಿ ದೊರೆತ ಹಳೇಯ ನೋಟುಗಳು ಸೇರಿ ಇನ್ನಿತರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಗಿದ್ದು, ದಾಖಲೆಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಅವಲೋಕಿಸಿ ಅವರನ್ನು ಕರೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ತಿ ಬಗ್ಗೆಯೂ ತನಿಖೆ:ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ನಡೆಸುತ್ತಿದ್ದ ಪಾಲಿಕೆ ಮಾಜಿ ಸದಸ್ಯ ಬಾಂಬ್ ನಾಗನ ಆಸ್ತಿ, ವಹಿವಾಟಿನ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಎಲ್ಲೆಲ್ಲಿ ರೆಸಾರ್ಟ್, ಫಾರಂ ಹೌಸ್, ನಿವೇಶನಗಳನ್ನು ಹೊಂದಿರುವ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳಿಗೆ ರಾಷ್ಟ್ರ ನಾಯಕರ ಹೆಸರು..!
ರೌಡಿನಾಗ ತನ್ನ ಇಬ್ಬರು ಮಕ್ಕಳಿಗೆ ಗಾಂಧಿ, ಶಾಸ್ತ್ರಿ ಎಂದು ರಾಷ್ಟ್ರ ನಾಯಕರ ಹೆಸರಿಟ್ಟಿದ್ದು, ಇದೀಗ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗಾಂಧಿ ಮತ್ತು ಶಾಸ್ತ್ರಿಗಳಿಬ್ಬರನ್ನೂ ರೌಡಿಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.ನಾಗನ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್?ಹಳೆ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗನ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ಇನ್ನು ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.ನಾಗನ ಸಹಚರರ ಬಂಧನ‘ಶ್ರೀರಾಮಪುರದ ಬಾಂಬ್‌ನಾಗನ ಮನೆಯಲ್ಲಿ ಹಣ ವಶಕ್ಕೆ ಪಡೆದುಕೊಂಡ ಪೊಲೀಸರು, ಶನಿವಾರ ಆತನ ಸಹಚರರಾದ ಮಣಿ ಮತ್ತು ಅಪ್ಪಿಎಂಬುವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.







