ಮೂಲಭೂತ ಹಕ್ಕುಗಳ ನೆಲೆಯಲ್ಲಿ ಮಕ್ಕಳ ಅಭಿವೃದ್ಧಿ: ನಿರಂಜನಾರಾಧ್ಯ

ಬೆಂಗಳೂರು, ಎ.15: ಭಾರತದ ಸಂವಿಧಾನದಲ್ಲಿ ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯು ಸಮಗ್ರವಾಗಿರಬೇಕೆಂಬ ಉದ್ದೇಶ ಹೊಂದಿದೆ. ಇದರ ಮೊದಲ ಹೆಜ್ಜೆ ಸಮನ್ವಯ, ಸಹಕಾರ ಮತ್ತು ಒಗ್ಗೂಡಿ ಕೆಲಸ ಮಾಡುವುದು. ಈ ಮೂರು ಅಂಶಗಳನ್ನು ಸಾಧಿಸುವುದು ಈ ಕೋರ್ಸ್‌ನ ಉದ್ದೇಶ ಎಂದು ಶಿಕ್ಷಣತಜ್ಞ ನಿರಂಜನಾರಾಧ್ಯ ಹೇಳಿದರು.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮಗು ಮತ್ತು ಕಾನೂನು ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶನಿವಾರ ಎಸ್‌ಸಿಎಮ್ ಭವನದಲ್ಲಿ ನಡೆದ ಮೂಲಭೂತ ಹಕ್ಕುಗಳ ನೆಲೆಯಲ್ಲಿ ಮಕ್ಕಳ ಅಭಿವೃದ್ಧಿ ಒಂದು ವಾರದ ಬುನಾದಿ ಸರ್ಟಿಫಿಕೇಟ್ ಕೋರ್ಸ್‌ನ ಸಮಾರಂಭದಲ್ಲಿ ಮಾತನಾಡಿ ಅವರು, 15 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಈ ಕೋರ್ಸ್ ಮಕ್ಕಳಿಗೆ ಸಂಬಂಧಿಸಿದ ನೀತಿ, ಕಾನೂನು ಮತ್ತು ಕಾರ್ಯಕ್ರಮಗಳನ್ನು ಸಮಗ್ರವಾಗಿ ಪರಿಚಯಿಸುತ್ತದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಸರಕಾರದ ಅಪರ ಮಖ್ಯಕಾರ್ಯದರ್ಶಿ ಸಂಜೀವ್‌ಕುಮಾರ್ ಮಾತನಾಡಿ, 6 ದಿನಗಳಿಂದ ತರಬೇತಿ ಪಡೆದಿರುವ ತಾವು ಮಕ್ಕಳ ರಾಯಭಾರಿಗಳಾಗಿ ಕೆಲಸ ಮಾಡಬೇಕು. ತಾವು ಪ್ರತಿನಿಧಿಸುವ 18 ಜಿಲ್ಲೆಗಳಲ್ಲಿ ಈ ವಿಷಯದ ಬಗ್ಗೆ ವ್ಯಾಪಕ ಮಾಹಿತಿ ನೀಡಬೇಕೆಂದು ಕರೆ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಪ್ರೊ.ಎಲಿಜೆಬತ್, ಮಕ್ಕಳ ಸಮಗ್ರ ಅಭಿವೃದ್ಧಿ ಬಗ್ಗೆ ನಾವು ಶ್ರಮಪಟ್ಟು ಒಂದು ಬೀಜವನ್ನು ಹಾಕಿದ್ದೇವೆ ಅದು ಬೆಳೆದು ಹಣ್ಣು ಕೊಟ್ಟಾಗ ಮಾತ್ರ ನಮ್ಮ ಕೆಲಸ ಸಾರ್ಥಕ. ಸಮಾಜದ ಮನಸ್ಥಿತಿ ಬದಲಾದರೆ ಮಾತ್ರ ಮಕ್ಕಳ ಬದುಕು ಹಸನಾಗುತ್ತದೆ ಎಂದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನರ್ಮದಾ ಆನಂದ್ ಉಪಸ್ಥಿತರಿದ್ದರು.







