ಸಿಂಗಾಪುರ ಸೂಪರ್ ಸರಣಿ: ಪ್ರಣೀತ್-ಶ್ರೀಕಾಂತ್ ಫೈನಲ್ ಫೈಟ್

ಕೌಲಾಲಂಪುರ, ಎ.15: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಹಾಗೂ ಅನುಭವಿ ಆಟಗಾರ ಕೆ. ಶ್ರೀಕಾಂತ್ ಸಿಂಗಾಪುರ ಓಪನ್ ಸೂಪರ್ ಸರಣಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.
ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ ಫೈನಲ್‌ನಲ್ಲಿ ಪ್ರಣೀತ್ ಅವರು ಕೊರಿಯದ ಲೀ ಡಾಂಗ್ ಕಿಯೂನ್‌ರನ್ನು 21-6, 21-8 ನೇರ ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಪುರುಷರ ಸಿಂಗಲ್ಸ್‌ನ ಎರಡನೆ ಸೆಮಿ ಫೈನಲ್‌ನಲ್ಲಿ ಕೆ.ಶ್ರೀಕಾಂತ್ ಅವರು ಇಂಡೋನೇಷ್ಯದ ಆ್ಯಂಥೊನಿ ಸಿನಿಸುಕಾ ಜಿಂಟಿಂಗ್‌ರನ್ನು 21-13, 21-14 ಗೇಮ್‌ಗಳಿಂದ ಸೋಲಿಸಿದ್ದಾರೆ.
ಜನವರಿಯಲ್ಲಿ ಸೈಯದ್ ಮೋದಿ ಜಿಪಿ ಗೋಲ್ಡ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಪ್ರಣೀತ್ ಮೂರು ಬಾರಿ ಕೊರಿಯಾ ಮಾಸ್ಟರ್ಸ್ ಜಿಪಿ ಟೂರ್ನಿಯ ಚಾಂಪಿಯನ್ ಲೀ ಡಾಂಗ್‌ರನ್ನು ಮಣಿಸಿ ಇದೇ ಮೊದಲ ಬಾರಿ ಸೂಪರ್ ಸರಣಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
24ರ ಹರೆಯದ ಹೈದರಾಬಾದ್ ಆಟಗಾರ ಪ್ರಣೀತ್ ಕಳೆದ ವರ್ಷ ಕೆನಡಾ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. ಶನಿವಾರ ಇಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ಕೊರಿಯಾ ಆಟಗಾರನನ್ನು ಮೊದಲ ಗೇಮ್‌ನಲ್ಲಿ ಹಿಮ್ಮೆಟ್ಟಿಸಿ ಪ್ರಾಬಲ್ಯ ಮೆರೆದರು. ಎರಡನೆ ಗೇಮ್‌ನಲ್ಲೂ ಪ್ರಾಬಲ್ಯ ಮುಂದುವರಿಸಿದ ಪ್ರಣೀತ್ ಆರಂಭದಲ್ಲೇ 9-1 ಮುನ್ನಡೆ ಸಾಧಿಸಿದರು. ಅಂತಿಮವಾಗಿ 21-14 ರಿಂದ 2ನೆ ಗೇಮ್‌ನ್ನು ಗೆದ್ದುಕೊಂಡು ಫೈನಲ್‌ಗೆ ತಲುಪಿದರು.
ಪ್ರಣೀತ್ ವೃತ್ತಿಬದುಕಿನಲ್ಲಿ 2003ರ ಆಲ್ ಇಂಗ್ಲೆಂಡ್ ಚಾಂಪಿಯನ್ ಮುಹಮ್ಮದ್ ಹಫೀಝ್, ಮಾಜಿ ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಮಲೇಷ್ಯಾದ ಹಾಶಿಮ್ ಹಾಗೂ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ, ವಿಶ್ವದ ನಂ.1 ಆಟಗಾರ ಲೀ ಚೊಂಗ್ ವೀ ಅವರನ್ನು ಮಣಿಸಿದ್ದಾರೆ.







