ಇಂದು ಆರ್‌ಸಿಬಿ-ಪುಣೆ ಸೂಪರ್ ಜೈಂಟ್‌ಗೆ ನಿರ್ಣಾಯಕ ಪಂದ್ಯ
ಬೆಂಗಳೂರು, ಎ.15: ಹ್ಯಾಟ್ರಿಕ್ ಸೋಲಿನಿಂದ ಕಂಗಾಲಾಗಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ರವಿವಾರ ನಡೆಯಲಿರುವ ಪಂದ್ಯದಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುಖಾಮುಖಿಯಾಗಲಿದೆ. ಇವೆರಡೂ ತಂಡಗಳು ಸತತ ಸೋಲಿನಿಂದಾಗಿ ಸಮಾನ ದುಃಖಿಗಳಾಗಿವೆ. ಈ ವರ್ಷದ ಐಪಿಎಲ್‌ನಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ.
ಐಪಿಎಲ್‌ನಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿ ಶುಭಾರಂಭ ಮಾಡಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ಆ ಬಳಿಕ ಸತತವಾಗಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನಕ್ಕೆ ಜಾರಿದೆ. ಅಜಿಂಕ್ಯ ರಹಾನೆ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ದಾಖಲಿಸಿದ್ದಾರೆ. ಮೂರು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಮಾಯಾಂಕ್ ಅಗರವಾಲ್ ಗುಜರಾತ್ ವಿರುದ್ಧ ಪಂದ್ಯದಲ್ಲಿ ಆಡಿರಲಿಲ್ಲ. ನಾಯಕ ಸ್ಮಿತ್ ಹೊರತುಪಡಿಸಿ ಬೇರ್ಯಾವ ಬ್ಯಾಟ್ಸ್‌ಮನ್ ಒಟ್ಟು 100 ರನ್ ಗಳಿಸಿಲ್ಲ.
ಪುಣೆಯ ಮಧ್ಯಮ ಕ್ರಮಾಂಕ ದುರ್ಬಲವಾಗಿದ್ದು, 14.5 ಕೋ.ರೂ. ದಾಖಲೆ ಮೊತ್ತಕ್ಕೆ ಪುಣೆ ತಂಡದ ಪಾಲಾಗಿದ್ದ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ತನ್ನ ವೌಲ್ಯಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ಎಂಎಸ್ ಧೋನಿ ಕೂಡ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಇಮ್ರಾನ್ ತಾಹಿರ್ ಹೊರತುಪಡಿಸಿ ಉಳಿದ ಬೌಲರ್‌ಗಳ ಸಾಧನೆ ಶೂನ್ಯ.
ಟೀಮ್ ನ್ಯೂಸ್: ಆರ್‌ಸಿಬಿ: ಮಧ್ಯಮ ಕ್ರಮಾಂಕದ ದಾಂಡಿಗರ ವೈಫಲ್ಯ ಚಿಂತೆಯಾಗಿ ಕಾಡುತ್ತಿದೆ. ಪವನ್ ನೇಗಿ ಆಲ್‌ರೌಂಡರ್ ಸ್ಥಾನಕ್ಕೆ ನ್ಯಾಯ ಒದಗಿಸಿಲ್ಲ. ನೇಗಿ ಸ್ಥಾನವನ್ನು ಸಚಿನ್ ಬೇಬಿ ತುಂಬುವ ಸಾಧ್ಯತೆಯಿದೆ. ಆರ್‌ಪಿಎಸ್:
ಐಪಿಎಲ್‌ನಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಫರ್ಗ್ಯುಸನ್ 4 ಓವರ್‌ಗಳಲ್ಲಿ 44 ರನ್ ನೀಡಿ ಒಂದೂ ವಿಕೆಟ್ ಪಡೆಯದೇ ದುಬಾರಿಯಾಗಿದ್ದರು. ಆಸೀಸ್ ಆಲ್‌ರೌಂಡರ್ ಡೇನಿಯಲ್ ಕ್ರಿಸ್ಟಿಯನ್ ಆಡುವ ಬಳಗಕ್ಕೆ ಆಯೆಯಾಗಬಹುದು. ರಾಹುಲ್ ಚಾಹರ್ ಬದಲಿಗೆ ಸೌರಭ್ ಕುಮಾರ್ ಆಯ್ಕೆಯಾಗುವ ಸಾಧ್ಯತೆಯಿದೆ.
ಅಂಕಿ-ಅಂಶ:
*ಇಮ್ರಾನ್ ತಾಹಿರ್ ಏಳು ವಿಕೆಟ್‌ಗಳನ್ನು ಪಡೆದು ಪುಣೆ ಬೌಲಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
* ಆರ್‌ಪಿಎಸ್ ಬ್ಯಾಟಿಂಗ್ ಸರದಿಯಲ್ಲಿ ಸ್ಟೀವನ್ ಸ್ಮಿತ್(153 ರನ್) ಮಾತ್ರ 100ಕ್ಕೂ ಅಧಿಕ ರನ್ ಗಳಿಸಿದ್ದಾರೆ.
* ಎಬಿಡಿ ವಿಲಿಯರ್ಸ್ ಈ ಋತುವಿನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು(10) ಬಾರಿಸಿದ್ದಾರೆ.
ಮುಂಬೈಗೆ ಇಂದು ಗುಜರಾತ್ ಲಯನ್ಸ್ ಎದುರಾಳಿ
ಮುಂಬೈ, ಎ.15: ಆಲ್‌ರೌಂಡರ್ ಕೀರನ್ ಪೊಲಾರ್ಡ್ ಸಾಹಸದ ನೆರವಿನಿಂದ ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ರವಿವಾರ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ.
ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗೆಲುವಿಗೆ 143 ರನ್ ಚೇಸಿಂಗ್‌ಗೆ ತೊಡಗಿದ್ದ ಮುಂಬೈ ಇಂಡಿಯನ್ಸ್ ತಂಡ ವಿಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬದ್ರಿ ಸ್ಪಿನ್ ಮೋಡಿಗೆ ಸಿಲುಕಿ ಕೇವಲ 7 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆರ್‌ಸಿಬಿ ಪರ ಆಡಿರುವ ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬದ್ರೀ ಗಮನಾರ್ಹ ಪ್ರದರ್ಶನ ನೀಡಿದ್ದರು.
ತಂಡದ ಸಂಕಷ್ಟದಲ್ಲಿದ್ದಾಗ ಆರನೆ ವಿಕೆಟ್‌ಗೆ ಕ್ರನಾಲ್ ಪಾಂಡ್ಯ ಅವರೊಂದಿಗೆ 93 ರನ್ ಜೊತೆಯಾಟ ನಡೆಸಿದ್ದ ಪೊಲಾರ್ಡ್ ಆರ್‌ಸಿಬಿ ಕೈಯಿಂದ ಪಂದ್ಯವನ್ನು ಕಸಿದುಕೊಂಡಿದ್ದರು. ಆರ್‌ಸಿಬಿಯನ್ನು ರೋಚಕವಾಗಿ ಮಣಿಸಿದ್ದ ಮುಂಬೈ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿತ್ತು.
ಮುಂಬೈ 2013ರ ಐಪಿಎಲ್ ಬಳಿಕ ಉತ್ತಮ ಆರಂಭ ಪಡೆದಿದೆ. ಈವರೆಗೆ ಆಡಿರುವ 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದೆ.
ಮತ್ತೊಂದೆಡೆ, ತವರು ಮೈದಾನ ರಾಜ್‌ಕೋಟ್‌ನಲ್ಲಿ ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಮಣಿಸಿದ್ದ ಗುಜರಾತ್ ಲಯನ್ಸ್ ಕೊನೆಗೂ ಗೆಲುವಿನ ಖಾತೆ ತೆರೆದಿತ್ತು.
ಈ ವರ್ಷದ ಐಪಿಎಲ್‌ನಲ್ಲಿ ಕಳಪೆ ಆರಂಭ ಪಡೆದಿದ್ದ ಗುಜರಾತ್ ತಂಡ ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಪುಣೆ ವಿರುದ್ಧ ಮೊದಲ ವಿಕೆಟ್‌ಗೆ 94 ರನ್ ಕಲೆ ಹಾಕಿ ಉತ್ತಮ ಆರಂಭ ಪಡೆದಿತ್ತು. ಮೆಕಲಮ್(49)ರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಡ್ವೆಯ್ನೆ ಸ್ಮಿತ್ ಕೇವಲ 3 ರನ್‌ನಿಂದ ಅರ್ಧಶತಕ ವಂಚಿತರಾಗಿದ್ದರು.
ಲಯನ್ಸ್ ಬೌಲಿಂಗ್ ವಿಭಾಗದಲ್ಲಿ ಆ್ಯಂಡ್ರೂ ಟೈ 17 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದಾರೆ. ಟೈ ಐಪಿಎಲ್‌ನ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೊದಲ ಆಟಗಾರ ಎನಿಸಿಕೊಂಡಿದ್ದರು.
ಮುಂಬೈ ಪ್ರಾಬಲ್ಯ: ಮುಂಬೈ ತಂಡ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಪಾಂಡ್ಯ ಸಹೋದರರು ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಮುಂಬೈ ನಾಲ್ಕು ಪಂದ್ಯಗಳಲ್ಲಿ 668 ರನ್ ಗಳಿಸಿದ್ದು, ಪಾಂಡೆ ಬ್ರದರ್ಸ್ ಒಟ್ಟಿಗೆ 163 ರನ್ ಗಳಿಸಿದ್ದಾರೆ. ಮುಂಬೈ ಗಳಿಸಿರುವ 25 ವಿಕೆಟ್‌ಗಳ ಪೈಕಿ ಪಾಂಡೆ ಸಹೋದರರು 8 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ನಾಯಕ ರೋಹಿತ್ ಶರ್ಮ ಫಾರ್ಮ್ ಕಳವಳಕಾರಿಯಾಗಿದೆ. ಶರ್ಮ 4 ಪಂದ್ಯಗಳಲ್ಲಿ ಕೇವಲ 9 ರನ್ ಗಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದ ಶರ್ಮ ವಿಜಯ್ ಹಝಾರೆ ಟ್ರೋಫಿಯಲ್ಲಿ ಕೇವಲ ಎರಡೇ ಪಂದ್ಯ ಆಡಿದ್ದರು. ಅದರಲ್ಲಿ 20 ರನ್ ಗಳಿಸಿದ್ದರು.
ಇಂದಿನ ಪಂದ್ಯಗಳು
ಮುಂಬೈ ಇಂಡಿಯನ್ಸ್-ಗುಜರಾತ್ ಲಯನ್ಸ್
ಸ್ಥಳ: ಮುಂಬೈ, ಸಮಯ: ಸಂಜೆ 4:00
ಪುಣೆ ಸೂಪರ್ ಜೈಂಟ್-ರಾಯಲ್ ಚಾಲೆಂಜರ್ ಬೆಂಗಳೂರು
ಸ್ಥಳ: ಬೆಂಗಳೂರು, ಸಮಯ: ರಾತ್ರಿ 8:00







