ಯುವಕರನ್ನು ಥಳಿಸಿ ಪಾಕ್ ವಿರುದ್ಧ ಘೋಷಣೆ ಕೂಗಲು ಒತ್ತಾಯಿಸಿದ ಯೋಧರು!

ಶ್ರೀನಗರ,ಎ.15: ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಯ ಆರೋಪಗಳ ನಡುವೆಯೇ ಸೇನೆಯ ಯೋಧರು ಯುವಕರನ್ನು ಥಳಿಸುತ್ತಿರುವ ಮತ್ತು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವಂತೆ ಅವರನ್ನು ಬಲವಂತ ಗೊಳಿಸುತ್ತಿರುವ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಒಂದು ವೀಡಿಯೊದಲ್ಲಿ ನಾಲ್ವರು ಯೋಧರು ಪುಲ್ವಾಮಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಯನ್ನು ನೆಲಕ್ಕೆ ಕೆಡವಿ ಲಾಠಿಗಳಿಂದ ಬಡಿಯುತ್ತಿರುವ ದೃಶ್ಯವಿದ್ದರೆ, ಇನ್ನೊಂದರಲ್ಲಿ ಸೇನಾ ವಾಹನದಲ್ಲಿ ಪಾಕಿಸ್ತಾನವನ್ನು ನಿಂದಿಸುವಂತೆ ಮತ್ತು ಪಾಕಿಸ್ತಾನ್ ಮುರ್ದಾಬಾದ್ ಘೋಷಣೆಯನ್ನು ಕೂಗುವಂತೆ ಯೋಧನೋರ್ವ ಮೂವರು ಯುವಕರನ್ನು ಬಲವಂತಗೊಳಿಸುತ್ತಿರುವ ದೃಶ್ಯವಿದೆ.
ಯೋಧ ಈ ಯುವಕರನ್ನು ‘ನಿಮಗೆ ಸ್ವಾತಂತ್ರ ಬೇಕೇ ’ಎಂದು ಪ್ರಶ್ನಿಸಿ ಕೆನ್ನೆಗೆ ಬಾರಿಸುವ ಮತ್ತು ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ. ಈ ಪೈಕಿ ಓರ್ವ ಯುವಕನ ಹಣೆಯಿಂದ ರಕ್ತ ಚಿಮ್ಮುತ್ತಿರುವದನ್ನೂ ವೀಡಿಯೊ ತೋರಿಸಿದೆ.
ಈ ವೀಡಿಯೊಗಳನ್ನು ಚಿತ್ರೀಕರಿಸಿದ್ದು ಯಾರು ಎನ್ನುವುದು ಸ್ಪಷ್ಟವಾಗಿಲ್ಲವಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಕಾಶ್ಮೀರದ ನೆಟಿಜನ್‌ಗಳಿಂದ ಖಂಡನೆಗಳು ವ್ಯಕ್ತವಾಗಿವೆ.