ಯುವ ಫುಟ್ಬಾಲ್: ಭಾರತ ತಂಡಕ್ಕೆ ಎನ್‌ಆರ್‌ಐ ಯುವಕ

ಪಣಜಿ, ಎ.16: ಮುಂದಿನ ಅಕ್ಟೋಬರ್‌ನಲ್ಲಿ ನಡೆಯುವ 17 ವರ್ಷ ವಯೋಮಿತಿಯ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಅಮೆರಿಕದ ಎನ್‌ಆರ್‌ಐ ಯುವಕ ನಮಿತ್ ದೇಶಪಾಂಡೆ ಆಯ್ಕೆಯಾಗಿದ್ದಾರೆ. ಸಾಗರೋತ್ತರ ಸ್ಕೌಟಿಂಗ್ ಪೋರ್ಟೆಲ್ ಮೂಲಕ ಈ ಯುವಕನ ಸಾಧನೆಯನ್ನು ಪರಿಶೀಲಿಸಿದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಈ ಆಯ್ಕೆ ಮಾಡಿದೆ.
ಈ ಪೋರ್ಟೆಲ್ ಯುವ ವಿಶ್ವಕಪ್ ಭಾರತ ತಂಡದ ಸಿಇಒ ಅಭಿಷೇಕ್ ಯಾದವ್ ಅವರ ಕನಸಿನ ಯೋಜನೆಯಾಗಿದ್ದು, ಭಾರತದ ಕ್ರೀಡಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಯುವ ಎನ್‌ಆರ್‌ಐ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಎನ್‌ಆರ್‌ಐ ಯುವಕರು ತಮ್ಮ ಪುಟ್‌ಬಾಲ್ ಆಟದ ವಿಡಿಯೊಗಳನ್ನು ಇಲ್ಲಿ ಪ್ರಸ್ತುತಪಡಿಸಿ ಆಯ್ಕೆದಾರರ ಮನ ಗೆಲ್ಲಲು ಅವಕಾಶ ಕಲ್ಪಿಸಲಾಗಿತ್ತು. ಹಲವು ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೂ, ಬಹುತೇಕ ಆಯ್ಕೆಗಾರರ ಗಮನ ಸೆಳೆದದ್ದು ಸೆಂಟರ್ ಬ್ಯಾಕ್ ಆಟಗಾರ ದೇಶಪಾಂಡೆ.
ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ದೇಶಪಾಂಡೆ, ಭಾರತೀಯ ತಂಡ ತರಬೇತಿ ಪಡೆಯುತ್ತಿರುವ ಬ್ರೆಝಿಲ್‌ಗೆ ಪ್ರಯಾಣ ಬೆಳೆಸಿ, ಅಲ್ಲೂ ಕೋಚ್ ನಿಕೋಲ್ ಆದಂ ಅವರ ಗಮನ ಸೆಳೆದರು. ಆದರೆ ಈ ಜರ್ಮನ್ ಕೋಚ್‌ಗೆ ದೈಹಿಕ ಕಿರುಕುಳ ಹಾಗೂ ನಿಂದನೆ ಕಾರಣಕ್ಕೆ ಗೇಟ್‌ಪಾಸ್ ನೀಡಲಾಯಿತು. ಬಳಿಕ ಪೋರ್ಚ್‌ಗೀಸ್ ಕೋಚ್ ಲೂಯಿಸ್ ಡೆ ಮಟೋಸ್ ಅಧಿಕಾರ ವಹಿಸಿಕೊಂಡಾಗ, ದೇಶಪಾಂಡೆ ಗೋವಾಕ್ಕೆ ನಾಲ್ಕು ದಿನಗಳ ಪರೀಕ್ಷೆಗೆ ಆಗಮಿಸಿ, ಇತರ ಎಲ್ಲ ಆಟಗಾರರಿಗಿಂತ ಉತ್ತಮ ಸಾಧನೆ ತೋರಿದರು.
"ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಸಾಗರೋತ್ತರ ಪ್ರತಿಭೆಗಳನ್ನು ಅನಾವರಣಗೊಳಿಸುವ ಸ್ಕೌಟಿಂಗ್ ಯೋಜನೆ ಖುಷಿ ನೀಡಿದೆ. ಒಬ್ಬ ಆಟಗಾರ ಈ ಹಂತಕ್ಕೆ ಬೆಳೆಯಲು ಆತ ಹಾಗೂ ಆತನ ಪೋಷಕರ ಶ್ರಮ ಅಪಾರ" ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.
2006ರಿಂದ ಅಮೆರಿಕದಲ್ಲಿ ತಂದೆ ತಾಯಿ ಜತೆ ವಾಸವಿರುವ ದೇಶಪಾಂಡೆ, ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರೂ, ಮುಂದಿನ ತಿಂಗಳು ಪೋರ್ಚ್‌ಗೀಸ್‌ಗೆ ತೆರಳಿ ಬಾರತ ತಂಡವನ್ನು ಸೇರಿಕೊಳ್ಳುವರು. ಯೂರೋಪ್ ಅನುಭವಕ್ಕಾಗಿ ತೆರಳಿರುವ ಭಾರತ ತಂಡ ಅಲ್ಲಿ ಪೋರ್ಚ್‌ಗೀಸ್, ಸ್ಪೇನ್, ಇಟೆಲಿ ಹಾಗೂ ಹಂಗೇರಿ ವಿರುದ್ಧ ಸೌಹಾರ್ದ ಪಂದ್ಯಗಳನ್ನು ಆಡಲಿದೆ. ಅಂತಿಮ ಸುತ್ತಿನ ಸಿದ್ಧತೆಗಾಗಿ ಮತ್ತೆ ಸ್ವದೇಶಕ್ಕೆ ಬರಲಿದೆ.







