ಹಿಂದಿಗೆ ಅಪಸ್ವರ: ಬಿಹು ವೇದಿಕೆಯಿಂದ ಹೊರನಡೆದ ಟಾಪ್ ಸಿಂಗರ್

ಗುವಾಹತಿ, ಎ.16: ಹಿಂದಿ ಹಾಡು ಹಾಡಲು ಅವಕಾಶ ನೀಡದ ಕಾರಣಕ್ಕೆ ಅಸ್ಸಾಂನ ಅತ್ಯುತ್ತಮ ಗಾಯಕ ಝುಬೀನ್ ಗರ್ಗ್ ಮುನಿಸಿಕೊಂಡು ಅರ್ಧದಿಂದಲೇ ವೇದಿಕೆಯಿಂದ ನಿರ್ಗಮಿಸಿದ ಕ್ಷಣಕ್ಕೆ ನೂನ್‌ಮತಿ ಬಿಹು ಸನ್ಮಿಲನ ವೇದಿಕೆ ಸಾಕ್ಷಿಯಾಯಿತು. ಶುಕ್ರವಾರ ತಡರಾತ್ರಿಯ ಈ ಕಾರ್ಯಕ್ರಮ ಸಂಘಟಕರು ಹಾಗೂ ಗಾಯಕನ ನಡುವೆ ಬೀದಿ ಜಗಳಕ್ಕೂ ಕಾರಣವಾಯಿತು.
ನಡೆದದ್ದಿಷ್ಟು: ಬಿಹು ಹಾಗೂ ಅಸ್ಸಾಮಿ ಭಾಷೆಯ ಹಲವು ಹಾಡುಗಳನ್ನು ಪ್ರಸ್ತುತಪಡಿಸಿದ ಬಳಿಕ ಗರ್ಗ್, ಹಿಂದಿ ಹಾಡು ಹೇಳಲು ಆರಂಭಿಸಿದರು. ಆಗ ಸಂಘಟಕರು ವೇದಿಕೆಗೆ ಆಗಮಿಸಿ, ಹಿಂದಿ ಹಾಡು ನಿಲ್ಲಿಸುವಂತೆ ಸೂಚಿಸಿದರು. ಇದು ಗಾಯಕ ಹಾಗೂ ಸಂಘಟಕರ ನಡುವಿನ ವಾಗ್ವಾದ, ಮೈಕ್ರೋಫೋನ್ ಕಿತ್ತುಕೊಳ್ಳುವವರೆಗೂ ಸಾಗಿತು. ಗಾಯಕನಿಗೆ ತನ್ನ ಆಯ್ಕೆಯ ಹಾಡು ಹೇಳಲು ಅವಕಾಶ ಇರಬೇಕು ಎಂದು ಅಸಮಾಧಾನ ಸೂಚಿಸುತ್ತಲೇ ಗರ್ಗ್ ವೇದಿಕೆಯಿಂದ ಹೊರ ನಡೆದರು.
"ನಾವು ಯಾವ ಭಾಷೆಗೂ ವಿರೋಧವಲ್ಲ. ಆದರೆ ಬಿಹು ವೇದಿಕೆಯಲ್ಲಿ ಹಿಂದಿ ಹಾಡು ಹೇಳದಂತೆ ಮೊದಲೇ ಒಪ್ಪಂದವಾಗಿತ್ತು" ಎಂದು ನೂನ್‌ಮತಿ ಬಿಹು ಸನ್ಮಿಲನದ ಅಧ್ಯಕ್ಷ ಮಧುರಂಜನ್ ನಾಥ್ ಹೇಳಿದ್ದಾರೆ. ಅಸ್ಸಾಂನ ಅತಿಹೆಚ್ಚು ಸಂಭಾವನೆ ಪಡೆಯುವ ಗಾಯಕ ಝುಬೀನ್ ಗರ್ಗ್ ಈ ಬಗ್ಗೆ ಪ್ರತಿಕ್ರಿಯಿಸಿ, "ನಾನು ಇದುವರೆಗೆ 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು 25 ವರ್ಷಗಳಲ್ಲಿ ಹಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ರಾಷ್ಟ್ರಭಾಷೆ. ಬಿಹೂ ಒಂದು ಸಂಗೀತ ಸಮ್ಮೇಳನ. ಅಸ್ಸಾಮಿ, ಹಿಂದಿ, ಬಂಗಾಳಿ ಎಲ್ಲವೂ ಸಂಸ್ಕೃತ ಮೂಲದಿಂದ ಹುಟ್ಟಿಕೊಂಡ ಭಾಷೆಗಳು. ಯಾಕೆ ಹಿಂದಿಯನ್ನು ವಿರೋಧಿಸಿದರು ಎನ್ನುವುದು ಅರ್ಥವಾಗುತ್ತಿಲ್ಲ" ಎಂದು ಹೇಳಿದ್ದಾರೆ.
"ಬಿಹು ಜನಪ್ರಿಯಗೊಳಿಸುವ ಸಲುವಾಗಿ ಆಯೋಜಿಸಿದ ಈ ಸನ್ಮಿಲನದಲ್ಲಿ 53 ವರ್ಷಗಳಲ್ಲಿ ಯಾರೂ ಹಿಂದಿ ಹಾಡು ಹಾಡಿಲ್ಲ" ಎಂದು ಸಂಘಟಕರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕ್ರಿಶ್-3 ಚಿತ್ರದ "ದಿಲ್ ತೂ ಹೈ ಬೇಟಾ" ಹಾಡು ಗುನುಗುತ್ತಲೇ ಗರ್ಗ್ ವೇದಿಕೆಯಿಂದ ನಿರ್ಗಮಿಸಿದರು. ಬರಾಲುಮುಖದಲ್ಲಿ ನಡೆದ ಮತ್ತೊಂದು ಬಿಹು ಪೆಂಡಾಲ್‌ನಲ್ಲಿ ಹಲವು ಹಿಂದಿ ಗೀತೆಗಳೊಂದಿಗೆ ಗರ್ಗ್ ಜನಮನ ಸೂರೆಗೊಂಡರು.
ಈ ವಿವಾದ ವ್ಯಾಪಕ ಪರ- ವಿರೋಧಿ ಚರ್ಚೆಯನ್ನು ಹುಟ್ಟುಹಾಕಿದ್ದು, ಕಲಾವಿದನ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ಹಲವರು ಘಟನೆಯನ್ನು ಖಂಡಿಸಿದ್ದಾರೆ. ಹಿರಿಯ ಅಸ್ಸಾಮಿ ಕಲಾವಿದ ಬಿಜು ಫುಕಾನ್, "ಪ್ರತಿ ಕಲಾವಿದರಿಗೂ ಮುಕ್ತವಾಗಿ ಅಭಿವ್ಯಕ್ತಪಡಿಸುವ ಹಕ್ಕು ಇದೆ" ಎಂದು ಪ್ರತಿಪಾದಿಸಿದ್ದಾರೆ. ಆದರೆ ಹಿರಿಯ ಪತ್ರಕರ್ತ ಹೈದರ್ ಹುಸೇನ್, "ಹಿಂದಿ ಹಾಡು ಹಾಡಲು ಬಿಹು ವೇದಿಕೆಯಲ್ಲ" ಎಂದು ಸಂಘಟಕರನ್ನು ಸಮರ್ಥಿಸಿಕೊಂಡಿದ್ದಾರೆ.