117ನೇ ವಯಸ್ಸಿನಲ್ಲಿ ಜೀವನಯಾನ ಮುಗಿಸಿದ "ವಿಶ್ವದ ಹಿರಿಯಜ್ಜಿ"

ವರ್ಬೇನಿಯಾ (ಇಟೆಲಿ): "ವಿಶ್ವದ ಹಿರಿಯಜ್ಜಿ" ಎಂಬ ಹೆಗ್ಗಳಿಕೆ ಪಡೆದಿದ್ದ 117 ವರ್ಷದ ಎಮ್ಮಾ ಮೊರಾನೊ (117) ಉತ್ತರ ಇಟೆಲಿಯ ವರ್ಬೇನಿಯಾದಲ್ಲಿ ಶನಿವಾರ ನಿಧನರಾದರು.
1899ರ ನವೆಂಬರ್ 29ರಂದು ಹುಟ್ಟಿದ ಮೊರಾನೊ, 1800ನೇ ಶತಮಾನದ ಕೊನೆಯ ಕೊಂಡಿ ಎನಿಸಿಕೊಂಡಿದ್ದರು. ಶನಿವಾರ ಮಧ್ಯಾಹ್ನ ಕುರ್ಚಿಯಲ್ಲಿ ಕುಳಿತಿದ್ದ ಮೊರಾನೊ ಆ ವೇಳೆ ಕೊನೆಯುಸಿರೆಳೆದರು ಎಂದು ಅವರ ಆರೈಕೆ ಮಾಡುತ್ತಿದ್ದ ವ್ಯಕ್ತಿ ಹೇಳಿದ್ದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ.ಕಾರ್ಲೊ ಬಾವಾ ಪ್ರಕಟಿಸಿದ್ದಾರೆ. ಶುಕ್ರವಾರ ಕಾರ್ಲೊ, ಚಿಕಿತ್ಸೆಗಾಗಿ ಮೊರಾನೊ ನಿವಾಸಕ್ಕೆ ಭೇಟಿ ನೀಡಿದ್ದರು. "ಆಗ ಕೂಡಾ ಆತ್ಮೀಯವಾಗಿ ಕೈ ಹಿಡಿದು ಕೃತಜ್ಞತೆ ಸಲ್ಲಿಸಿದ್ದರು" ಎಂದು ಕಾರ್ಲೊ ಹೇಳಿದ್ದಾರೆ.
ಎಂಟು ಮಕ್ಕಳ ಪೈಕಿ ಹಿರಿಯರಾಗಿದ್ದ ಮೊರಾನೊ ಅವರ ಎಲ್ಲ ಕಿರಿಯ ಸಹೋದರಿಯರು ಈ ಮುನ್ನವೇ ಮಡಿದಿದ್ದರು. "ಅವರದ್ದು ಅದ್ಭುತ ಜೀವನ. ಜೀವನ ಮುನ್ನಡೆಸುವಲ್ಲಿ ಅವರ ಅಸಾಧ್ಯ ಬಲ ಬೆರಗುಗೊಳಿಸುವಂಥದ್ದು" ಎಂದು ಮೇಯರ್ ಬಣ್ಣಿಸಿದ್ದಾರೆ.
ಮೊದಲನೇ ಮಹಾಯುದ್ಧದಲ್ಲಿ ಅವರ ಮೊದಲ ಪ್ರಿಯಕರ ಮಡಿದಿದ್ದರು. ಬಳಿಕ ವಿವಾಹವಾಗಿ ಹಿಂಸೆ ನೀಡುತ್ತಿದ್ದ ಗಂಡನನ್ನು ಎರಡನೇ ಮಹಾಯುದ್ಧ ಸಂದರ್ಭದಲ್ಲಿ ತ್ಯಜಿಸಿದ್ದರು. ಆಕೆಯ ಏಕೈಕ ಮಗನ ಸಾವಿನ ಬಳಿಕ ಈ ನಿರ್ಧಾರಕ್ಕೆ ಬಂದಿದ್ದರು. ಸದಾ ವಿಧೇಯರಾಗಿದ್ದ ಮೊರಾನೊ ಫ್ಯಾಸಿಸ್ಟ್ ಯುಗದಲ್ಲಿ ಗಂಡನನ್ನು ಬಿಟ್ಟಿದ್ದರು ಎಂದು ಬಾವಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು.
ಸೆಣಬಿನ ಕಾರ್ಖಾನೆಯಲ್ಲಿ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೊರಾನೊ, ನಿವೃತ್ತಿಯ ಬಳಿಕ ಹೋಟೆಲ್‌ನಲ್ಲಿ ದುಡಿದು, ಸ್ವಾವಲಂಬಿ ಜೀವನ ಸಾಗಿಸುತ್ತಿದ್ದರು.







