ಇನ್ನು ನಿಮ್ಮ ಮೊಬೈಲ್ ಬಿಲ್ ಕಡಿಮೆ ಬರಲಿದೆ!: ಅದು ಹೇಗೆಂದು ಇಲ್ಲಿ ನೋಡಿ

ಹೊಸದಿಲ್ಲಿ, ಎ.16: ಮೊಬೈಲ್ ಬಳಕೆದಾರರ ಅದರಲ್ಲೂ ಮುಖ್ಯವಾಗಿ ದೇಶದ ಉದ್ದಗಲಕ್ಕೂ ಸಂಚಾರದಲ್ಲಿರುವವರ ಮೊಬೈಲ್ ಬಿಲ್ ಇನ್ನು ಕಡಿಮೆ ಬರಲಿದೆ. ಅದು ಹೇಗೆ ಗೊತ್ತೇ? ದೇಶದ ಪ್ರಮುಖ ದೂರಸಂಪರ್ಕ ಸೇವಾ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಬಿಎಸ್‌ಇ, ವೊಡಾಫೋನ್ ಇಂಡಿಯಾ, ಐಡಿಯಾ ಸೆಲ್ಯುಲಾರ್ ಹಾಗೂ ಏರ್‌ಸೆಲ್ ಏಪ್ರಿಲ್ ತಿಂಗಳಿನಿಂದ ರೋಮಿಂಗ್ ಶುಲ್ಕ ತೊಡೆದುಹಾಕುವ ಮಹತ್ವದ ನಿರ್ಧಾರ ಕೈಗೊಂಡಿರುವುದು ಇದಕ್ಕೆ ಕಾರಣ.
ರಿಲಯನ್ಸ್ ಜಿಯೊ ಆಫರ್‌ಗಳಿಗೆ ಸಡ್ಡುಹೊಡೆಯುವ ಸಲುವಾಗಿ ಪ್ರಮುಖ ಟೆಲಿಕಾಂ ಸೇವಾ ಕಂಪೆನಿಗಳು ಈ ನಿರ್ಧಾರಕ್ಕೆ ಬಂದಿವೆ. ಈ ಕಂಪೆನಿಗಳು ರೋಮಿಂಗ್ ಶುಲ್ಕ ರದ್ದು ಮಾಡಿರುವ ಜತೆಗೆ ಹೊಸದಾಗಿ ಎಂಟ್ರಿ ಪಡೆದಿರುವ ರಿಲಯನ್ಸ್ ಜಿಯೊ ಇಡೀ ಜೀವಿತಾವಧಿಗೆ ಉಚಿತ ಕರೆ ಸೌಲಭ್ಯ ಕಲ್ಪಿಸಿದೆ. ಅಂದರೆ ಯಾವುದೇ ನೆಟ್‌ವರ್ಕ್‌ನ ರೋಮಿಂಗ್ ಕರೆಗೂ ಶುಲ್ಕ ಇಲ್ಲ. ರೋಮಿಂಗ್‌ನಲ್ಲಿರುವಾಗ ಹೊರಹೋಗುವ ಕರೆಗಳಿಗೆ ವಿಧಿಸುತ್ತಿದ್ದ ಪ್ರಿಮಿಯಂ ಶುಲ್ಕವನ್ನು ಕೂಡಾ ರದ್ದುಪಡಿಸಿದ್ದಾಗಿ ಏರ್‌ಟೆಲ್ ಹೇಳಿದೆ. ಇದರಿಂದಾಗಿ ವೊಡಾಫೋನ್ ಹಾಗೂ ಐಡಿಯಾಗೆ ಕೂಡಾ ಅನ್ಯಮಾರ್ಗವಿಲ್ಲದೇ ಅನುಸರಿಸಿವೆ.
ಅಧಿಕ ದೂರದ ಕರೆಗಳಾಗಲೀ, ಇತರ ಕರೆಗಳಾಗಲೀ, ಗ್ರಾಹಕರು ಹೆಚ್ಚು ಹೆಚ್ಚು ಓಟಿಟಿ (ಓವರ್ ದ ಟಾಪ್) ಸಂವಹನಾ ಆಪ್‌ಗಳಾದ ವಾಟ್ಸ್ ಆಪ್, ಸ್ಕೈಪೆ, ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ರೋಮಿಂಗ್ ಎನ್ನುವುದು ಹಳಸಲು ಪರಿಕಲ್ಪನೆಯಾಗಿದೆ.
ಆದಾಗ್ಯೂ ಟೆಲಿಕಾಂ ಸೇವಾ ಕಂಪೆನಿಗಳಿಗೆ, ರೋಮಿಂಗ್ ಶುಲ್ಕದ ರದ್ದತಿಯಿಂದಾಗುವ ಆದಾಯ ನಷ್ಟವನ್ನು ಒಟ್ಟಾರೆ ಕರೆಗಳ ಪ್ರಮಾಣ ಹೆಚ್ಚಳದ ಮೂಲಕ ಭರ್ತಿ ಮಾಡಬಹುದಾಗಿದೆ.





