ತಲಪಾಡಿ ಟೋಲ್ ಸಿಬ್ಬಂದಿಯ ದುರ್ವರ್ತನೆ: ಯೂತ್ ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿಗೆ ದೂರು

ಮಂಜೇಶ್ವರ, ಎ.16: ತಲಪಾಡಿಯಲ್ಲಿನ ನವಯುಗ ಸಂಸ್ಥೆಯ ಟೋಲ್‌ನಲ್ಲಿ ಕಾಮಗಾರಿ ಮುಗಿಯುವ ಮೊದಲೇ ಸುಂಕ ವಸೂಲಾತಿ ಪ್ರಾರಂಭಗೊಂಡಿದ್ದು, ತಲಪಾಡಿ ಟೋಲ್ ಪರಿಸರದಲ್ಲಿ ಇಲ್ಲಿನ ಸಿಬ್ಬಂದಿ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಟೋಲ್‌ನಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವ ಸಿಬ್ಬಂದಿಯೇ ಜಾಸ್ತಿಯಿದ್ದು, ಕೆಲದಿನಗಳ ಹಿಂದೆ ವೃದ್ಧ ಚಾಲಕ ಹಾಗೂ ಯುವಕನೋರ್ವನಿಗೆ ಹಲ್ಲೆಗೈದ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂಡಲೇ ಮಧ್ಯಸ್ಥಿಕೆ ವಹಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನಸಬಾ ಕ್ಷೇತ್ರ ಸಮಿತಿ ಜಿಲ್ಲಾಧಿಕಾರಿಗೆ ಮನವಿ ನೀಡಿದೆ.
ಟೋಲ್ ಅಸುಪಾಸಿನ 5 ಕಿ.ಮೀ. ಸುತ್ತಳತೆಯ ಸ್ಥಳೀಯರಿಗೆ ಟೋಲ್ ವಿನಾಯಿತಿಯ ತೀರ್ಮಾನವಿದ್ದು, ಆದರೆ ಗುರುತು ಚೀಟಿ ತೋರಿಸಿದರೂ ಇಲ್ಲಿನ ಸಿಬ್ಬಂದಿ ಬಲವಂತವಾಗಿ ಸ್ಥಳೀಯರಿಂದ ಟೋಲ್ ವಸೂಲಾತಿ ಮಾಡುತ್ತಿದ್ದಾರೆ. ವಾಹನದ ಆರ್ ಸಿ ತೋರಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲೆಯ ಮಿಕ್ಕುಳಿದ ಟೋಲ್ ಗಳಲ್ಲಿ ಸ್ಥಳೀಯರಿಗೆ ಪೂರ್ಣ ವಿನಾಯಿತಿ ನೀಡುತ್ತಿದ್ದರೂ ತಲಪಾಡಿ ಟೋಲ್ ನಲ್ಲಿ ಮಾತ್ರ ನಿರಂತರ ಸಮಸ್ಯೆಗಳು ಉಂಟಾಗುತ್ತಿದೆಯೆಂದು ಯೂತ್ ಕಾಂಗ್ರೆಸ್ ಆರೋಪಿಸಿದೆ.
ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳನ್ನು ಟೋಲ್ ಸಿಬ್ಬಂದಿಯಾಗಿ ನೇಮಕಾತಿ ಮಾಡಬಾರದೆಂಬ ತೀರ್ಮಾನವಿದ್ದರೂ ತಲಪಾಡಿ ಟೋಲ್ ಬೂತ್ ನಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಕರ್ತವ್ಯದಲ್ಲಿದ್ದಾರೆ, ವಿಮಾನ ವಿಲ್ದಾಣದಿಂದ ಕೇರಳಕ್ಕೆ ತೆರಳುವ ಪ್ರಯಾಣಿಕರಿಂದ ಲಗೇಜ್ ಶುಲ್ಕವನ್ನು ಕೂಡಾ ವಸೂಲು ಮಾಡುತ್ತಿರುವ ಬಗ್ಗೆ, ಹಲ್ಲೆ ನಡೆಸುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿವೆ ಎಂದು ಯೂತ್ ಕಾಂಗ್ರೆಸ್ ಅರೋಪಿಸಿದೆ.
ಪತ್ರಿಕಾ ವರದಿಗಾರರನ್ನೂ ಕೂಡಾ ಬೆದರಿಸುವ ಇಲ್ಲಿನ ಸಿಬ್ಬಂದಿ ಜನಸಾಮಾನ್ಯರ ಜೊತೆ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಯೂತ್ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ತಂಡದಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಧ್ಯಕ್ಷ ಮಿಥುನ್ ರೈ, ಕಾಸರಗೋಡು ಜಿಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಯೂತ್ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಆಧ್ಯಕ್ಷ ನಾಸರ್ ಮೊಗ್ರಾಲ್, ಪದಾಧಿಕಾರಿಗಳಾದ ಶರೀಫ್ ಅರಿಬೈಲು, ಇಕ್ಬಾಲ್ ಕಳಿಯೂರು, ನವೀನ್ ರೈ ಮಂಗಲ್ಪಾಡಿ, ರಫೀಕ್ ಭದ್ರಾವತಿ ಮುಂತಾದವರು ಉಪಸ್ಥಿತರಿದ್ದರು







