ಗಲ್ಫ್ ವಲಯದ ಬ್ಯಾಂಕಿಂಗ್ ಜಾಲವನ್ನು ಹ್ಯಾಕ್ ಮಾಡಿದ ಅಮೆರಿಕ!

ವಾಷ್ಟಿಂಗ್ಟನ್, ಎ. 16: ಸ್ವಿಫ್ಟ್ ಬ್ಯಾಂಕಿಂಗ್ ಸಿಸ್ಟಂನಲ್ಲಿ ಅಮೆರಿಕ ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿ(ಎನ್‌ಎಸ್‌ಎ) ನುಸುಳಿವಿಕೆ ನಡೆಸಿದೆ ಎಂದು ಹ್ಯಾಕರ್‌ಗಳು ಬಹಿರಂಗಪಡಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ. ಶುಕ್ರವಾರ ಶ್ಯಾಡೊ ಬ್ರೋಕರ್ಸ್ ಎನ್ನುವ ಹ್ಯಾಕರ್ ಅಮೆರಿಕದ ಕಳ್ಳಾಟದ ದಾಖಲೆಯನ್ನು ಬಹಿರಂಗಪಡಿಸಿತ್ತು. ಸ್ವಿಫ್ಟ್ ಬ್ಯಾಂಕಿಂಗ್ ಶೃಂಖಲೆಯಲ್ಲಿ ನುಸುಳಿದ ಎನ್‌ಎಸ್‌ಎ ಮಧ್ಯಪ್ರಾಚ್ಯದ ಬ್ಯಾಂಕ್‌ಗಳ ಚಟುವಟಿಕೆಗಳನ್ನು ತಪಾಸಣೆ ನಡೆಸಿದೆ ಎಂದು ಹ್ಯಾಕರ್‌ಗಳು ಪ್ರಕಟಿಸಿದ್ದಾರೆ.
ಕುವೈಟ್, ದುಬೈ, ಬಹರೈನ್, ಜೋರ್ಡಾನ್, ಯಮನ್, ಕತರ್ ಮುಂತಾದಲ್ಲಿನ ಬ್ಯಾಂಕ್‌ಗಳು ,ಆರ್ಥಿಕ ಸಂಸ್ಥೆಗಳ ವಿವರವನ್ನು ಪರಿಶೀಲಿಸಿದೆ. ಜಗತ್ತಿನಾದ್ಯಂತ ಕಂಪ್ಯೂಟರ್‌ಗಳಲ್ಲಿ ಬಳಸುವ ಮೈಕ್ರೊಸಾಫ್ಟ್ ವಿಂಡೊಸ್‌ನ ಉತ್ಪನ್ನಗಳ ಅನೇಕ ಕೆಲಸಗಳನ್ನು ಕಂಡುಹುಡುಕಿ ಅವುಗಳನ್ನು ದುರುಪಯೋಗಿಸಲಾಗಿರುವ ಬಗ್ಗೆ ಹ್ಯಾಕರ್‌ಗಳು ಬಿಡುಗಡೆಗೊಳಿಸಿದ ದಾಖಲೆಗಳಲ್ಲಿ ವಿವರವಿದೆ ಎಂದು ಕಂಪ್ಯೂಟರ್ ಸುರಕ್ಷಾ ತಜ್ಞರು ದೃಢಪಡಿಸಿದ್ದಾರೆ. ದಾಖಲೆಗಳ ಪ್ರಕಾರ ವಿಂಡೊಸ್ ಆಪರೇಟಿಂಗ್ ಸಿಸ್ಟಂನ ಹಳೆಯ ಪ್ರತಿಗಳ ಮೇಲೆ ಎನ್‌ಎಸ್‌ಎ ನುಸುಳಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
ದಿನಾಲೂ ಕೋಟ್ಯಂತರ ಡಾಲರ್ ಹಸ್ತಾಂತರಕ್ಕೆ ಬ್ಯಾಂಕ್‌ಗಳು ಸ್ವಿಫ್ಟ್ ವ್ಯವಸ್ಥೆಯನ್ನು ಬಳಸುತ್ತವೆ. ಆದರೆ, ಸ್ವಿಪ್ಟ್ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, "ನಮ್ಮ ಸ್ವಂತ ವ್ಯವಸ್ಥೆಯನ್ನು ಮುಟ್ಟಲು ಎನ್‌ಎಸ್‌ಎಯಿಂದ ಸಾಧ್ಯವಾಗಿಲ್ಲ. ಅದು, ಕೇವಲ ಸೇವಾ ಬ್ಯೂರೊಗಳಲ್ಲಿ ನುಸುಳುವಿಕೆ ನಡೆಸಿದೆ" ಎಂದು ಸ್ವಿಫ್ಟ್ ಈಗಾಗಲೇ ಸ್ಪಷ್ಟೀಕರಣ ನೀಡಿದೆ.





