"ಫಳ್ನೀರ್ ಹೆಲ್ತ್ ಸೆಂಟರ್ ಸ್ಪೆಷಾಲಿಟಿ ಕ್ಲಿನಿಕ್" ಉದ್ಘಾಟನೆ

ಮಂಗಳೂರು, ಎ.16: ನಗರದ ಫಳ್ನೀರ್ ಬಳಿ ಲ್ಯಾಂಡ್ ಮಾರ್ಕ್ ಇನ್‌ಫ್ರಾ ಟೆಕ್ ಮೂಲಕ ನಿರ್ಮಾಣಗೊಂಡ ವೈದ್ಯರ ಕಟ್ಟಡ ಸಂಕೀರ್ಣ "ಫಳ್ನೀರ್ ಹೆಲ್ತ್ ಸೆಂಟರ್ ಸ್ಪೆಷಾಲಿಟಿ ಕ್ಲಿನಿಕ್"ನ್ನು ಉದ್ಯಾವರದ ಸೈಯದ್ ಅತ್ತಾವುಲ್ಲಾ ತಂಙಳ್ , ಸೈಯದ್ ಅಸ್ಲಂ ತಂಙಳ್ ಹಾಗೂ ಯುನಿಟಿ ಹೆಲ್ತ್ ಕೇರ್ ಸೆಂಟರ್‌ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಉದ್ಘಾಟಿಸಿದರು.
ಫಳ್ನೀರ್ ಹೆಲ್ತ್ ಸೆಂಟರ್ ಮಿನಿ ಭಾರತ ಇದ್ದಂತಿದೆ. ಎಲ್ಲಾ ಜಾತಿ, ಧರ್ಮದವರು ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗುವಂತೆ ವಿವಿಧ ವೈದ್ಯರು ಒಂದೇ ಕಡೆ ಇದ್ದಾರೆ. ಆರ್ಥಿಕ ಸಮಸ್ಯೆಯನ್ನು ಹೊಂದಿರುವ ಜನರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಹೊರೆಯಾಗದಂತೆ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ಸಹಾಯ ನೀಡುವ ಹೊಣೆಗಾರಿಕೆ ವೈದ್ಯರ ಮೇಲಿದೆ ಎಂದು ಸೈಯದ್ ಅತ್ತಾವುಲ್ಲಾ ತಂಙಳ್ ಹೇಳಿದರು.
ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ವೃತ್ತಿ. ಅದೇ ರೀತಿ ಕಟ್ಟಡ ನಿರ್ಮಾಣವೂ ಪವಿತ್ರ ವೃತ್ತಿ. ಎರಡೂ ವೃತ್ತಿಗಳೂ ಜನರ ವಿಶ್ವಾಸದ ಮೇಲೆ ನಿಂತಿರುತ್ತವೆ. ಇಲ್ಲಿ ಲಾಭ ಗಳಿಕೆಗಿಂತ ಸೇವೆ ಸಲ್ಲಿಕೆಗೆ ಪ್ರಮುಖ ಸ್ಥಾನವಿದೆ. ಈ ನಿಟ್ಟಿನಲ್ಲಿ ವೈದ್ಯರೆಲ್ಲರೂ ಸೇರಿ ಒಂದೇ ಸಂಕಿರ್ಣದಲ್ಲಿರುವ ಕಟ್ಟಡ "ಕ್ರೆಡೈ" ಸದಸ್ಯ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವುದು ಪ್ರಮುಖ ಹೆಜ್ಜೆಯಾಗಿದೆ ಎಂದು "ಕ್ರೆಡೈ" ಮಂಗಳೂರು ಘಟಕದ ಅಧ್ಯಕ್ಷ ಡಿ.ಬಿ.ಮೆಹ್ತಾ ಅಭಿಪ್ರಾಯಿಸಿದರು.
ವೈದ್ಯರ ಕಟ್ಟಡ ಸಂಕೀರ್ಣವೊಂದು ನಗರದಲ್ಲಿ"ಲ್ಯಾಂಡ್ ಮಾರ್ಕ್ ಇನ್‌ಫ್ರಾ ಟೆಕ್" ಮೂಲಕ ನಿರ್ಮಾಣಗೊಂಡಿರುವುದು ಇದೇ ಮೊದಲು ಎಂದು ಡಾ.ಮಹಮ್ಮದ್ ಮಜೀದ್ ಹೇಳಿದರು.
ಮನಪಾ ಸದಸ್ಯ ಅಬ್ದುಲ್ ರವೂಫ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ "ಲ್ಯಾಂಡ್ ಮಾರ್ಕ್ ಇನ್‌ಫ್ರಾ ಟೆಕ್" ಸಂಸ್ಥೆಯ ಆಡಳಿತ ನಿರ್ದೇಶಕ ಶಬೀರ್, ಡಾ.ಸೈಯದ್ ಮುಹಮ್ಮದ್, ಸಂಕೀರ್ಣದ ವೈದ್ಯರಾದ ಡಾ.ಪ್ರೇಮ್ ಆಳ್ವಾ, ಡಾ.ನವೀಶಾ ಲತೀಫ್, ಡಾ.ಅಶ್ರಫ್ ಅಹಮ್ಮದ್, ಡಾ.ಆಲಮ್ ನವಾಝ್, ಡಾ,ಕರೊಲಿನಾ ಪಿ. ಡಿಸೋಜ, ಡಾ.ಅಲ್ಕಾ ಸಿ. ಭಟ್, ಡಾ.ಎರೆಲ್ ಎ.ಐ. ಡಿಸೋಜ, ಡಾ.ಶ್ರೀಜಿತ್ ಪದ್ಮ ನಾಭ, ಹೈದರ್, ಡಾ.ಯಹ್ಯಾ ತಂಙಳ್, ಶೋಭಾ ಡಿ ರೋಡ್ರಿಗಸ್ ಮೊದಲಾದವರಿಗೆ ಸ್ಮರಣಿಕೆ ನೀಡಲಾಯಿತು.
ಮಾಸ್ಟರ್ ಶಾಹಿಲ್ ವಂದಿಸಿದರು.ಲವಿತಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.







