ಹೂ ಮಾರುವ ಮಹಿಳಾ ಕುಸ್ತಿಪಟು

ವಾರಣಾಸಿ, ಎ.16: ಆಕೆಯ ಹೆಸರು ಆಸ್ತಾ ವರ್ಮ. ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ಆಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಆಸ್ತಾ ಬಡತನದ ಬೇಗೆಯಿಂದ ಬಳಲಿದವರು.
ಕುಸ್ತಿಪಟುವಾಗಿರುವ ಆಸ್ತಾಗೆ ಬೇರೆ ಉದ್ಯೋಗ ಇಲ್ಲ. ಈ ಕಾರಣದಿಂದಾಗಿ ಕುಸ್ತಿಗೆ ಅಗತ್ಯದ ವಸ್ತುಗಳನ್ನು ಖರೀದಿಲು ಮತ್ತು ತನ್ನ ಕುಟುಂಬದ ನಿರ್ವಹಣೆಗಾಗಿ ಹೂ ಮಾರುವ ವೃತ್ತಿಯನ್ನು ಆಯ್ದುಕೊಂಡಿದ್ದಾರೆ. ಉತ್ತರ ಪ್ರದೇಶದ ವಾರಣಾಶಿಯ ಗಣೇಶ ದೇವಾಲಯದ ಮುಂದೆ ಹೂ ಮಾರಾಟ ಮಾಡುವ ಕಾಯಕ ನಡೆಸುತ್ತಿರುವ ಆಸ್ತಾ ಚಿಕ್ಕಂದಿನಲ್ಲೇ ತನ್ನ ತಂದೆ ರತನ್ ವರ್ಮಾರನ್ನು ಕಳೆದುಕೊಂಡಿದ್ದರು. ತಂದೆ ನಿಧನರಾದ ಹಿನ್ನೆಲೆಯಲ್ಲಿ ತನ್ನ ತಾಯಿ ಮತ್ತು ಇಬ್ಬರು ಒಡ ಹುಟ್ಟಿದ ತಂಗಿಯರ ಜೊತೆ ಅಜ್ಜನ ಮನೆ ಸೇರಿದರು. ಅಲ್ಲಿ ಆಕೆಗೆ ಬೆಟ್ಟದಂತ ಸವಾಲು ಎದುರಾಯಿತು. ಶಿಕ್ಷಣ ಪಡೆಯುವುದಕ್ಕಾಗಿ ಆಸ್ತಾ ಹೂ ಮಾರುವ ವೃತ್ತಿಯನ್ನು ಆಯ್ದುಕೊಂಡರು.
2008ರಲ್ಲಿ ಆಸ್ತಾ 10ನೆ ತರಗತಿಯ ಕಲಿಯುತ್ತಿದ್ದ ಸಂದರ್ಭದಲ್ಲಿ ಅದೊಂದು ಕಬಡ್ಡಿ ಆಡುತ್ತಿದ್ದಾಗ ದುರ್ಗಾಚರಣ್ ಇಂಟರ್ ಕಾಲೇಜು ಕೋಚ್ ಗೋಕರ್ಣನಾಥ್ ಯಾದವ್ ಕಣ್ಣಿಗೆ ಬಿದ್ದರು. ಯಾದವ್ ಅವರು ಆಸ್ತಾರ ಪ್ರತಿಭೆಯನ್ನು ಗುರುತಿಸಿ ಕುಸ್ತಿ ಆಖಾಡಕ್ಕಿಳಿಯಲು ಪ್ರೇರಣೆ ನೀಡಿದರು.ಯಾದವ್ ಮಾರ್ಗದರ್ಶನದಲ್ಲಿ ಕುಸ್ತಿ ತರಬೇತಿ ಆರಂಭಿಸಿದ ಆಸ್ತಾ ಶಾಲಾ ಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ಹುಡುಗರ ಜೊತೆ ಸ್ಪರ್ಧೆಗಿಳಿದ ಆಸ್ತಾಗೆ ಹೊಸ ಸಮಸ್ಯೆ ಎದುರಾಯಿತು. ಇದನ್ನು ಸ್ಥಳೀಯ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಮಗಳನ್ನು ಕುಸ್ತಿ ಆಖಾಡಕ್ಕೆ ಕಳಹಿಸದಂತೆ ಆಕೆಯ ತಾಯಿಗೆ ಕೆಲವು ಮಂದಿ ಹೇಳಿದರು. ಆದರೆ ಆಸ್ತಾ ತಾನು ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಿಲ್ಲ. ಈಗ ಆಕೆ ಕುಸ್ತಿಯಿಂದ ಪಡೆದಿರುವ ಪ್ರಶಸ್ತಿಯ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಬಗ್ಗೆ ಸ್ಥಳೀಯರಿಗೆ ಗೌರವದ ಭಾವನೆ ಇದೆ.
ಆಸ್ತಾಗೆ ಕುಸ್ತಿ ತರಬೇತಿಗೆ ಅಗತ್ಯದ ಆಹಾರದ ಆವಶ್ಯಕತೆಯನ್ನು ಪೂರೈಸಲು ಅವರಲ್ಲಿ ದುಡ್ಡಿಲ್ಲ. ವಾರಣಾಸಿಯ ಚಿಂತಾಮಣಿ ಗಣೇಶ್ ದೇವಸ್ಥಾನದ ಮುಂದೆ ಹೂ ಮಾರಾಟದಿಂದ 2ರಿಂದ 2,500 ರೂ. ಆದಾಯ ಬರುತ್ತಿದೆ.ಇದು ಅವರ ದಿನದ ಆವಶ್ಯತೆಗಳ ಪೂರೈಕೆಗೆ ಸಾಕಾಗುವುದಿಲ್ಲ. ಕುಸ್ತಿ ಸ್ಪರ್ಧೆಗೆ ತೆರಳಲು ಅನುಕೂಲವಾಗುವಂತೆ ಕುಸ್ತಿ ಕಿಟ್ ಪಡೆಯಲು ಅವರಲ್ಲಿ ದುಡ್ಡಿಲ್ಲವಂತೆ.
ಆಸ್ತಾ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಟುವಾಗಿ ರೂಪುಗೊಳ್ಳುವ ಕನಸು ಕಾಣುತ್ತಿದ್ದಾರೆ. ಆದರೆ ಆಕೆಯ ಕನಸು ನನಸಾಗಲು ಆಕೆ ಆರ್ಥಿಕವಾಗಿ ತೊಂದರೆಯಲ್ಲಿ ಸಿಲುಕಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ.
ಆಸ್ತಾ ಸಬ್ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಮೂರು ಬಾರಿ ಸ್ಪರ್ಧಿಸಿ ಪ್ರಥಮ, ದ್ವಿತೀಯ ಮತ್ತು ಮೂರನೆ ಸ್ಥಾನ ಪಡೆದಿದ್ದಾರೆ.ಜೂನಿಯರ್ ವಿಭಾಗದಲ್ಲಿ 3 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಪೈಕಿ ಮೀರತ್‌ನಲ್ಲಿ ಎರಡನೆ ಮತ್ತು ಮಥುರಾದಲ್ಲಿ ಮೂರನೆ ಸ್ಥಾನ ಪಡೆದಿದ್ದಾರೆ. ರಾಜ್ಯಮಟ್ಟದ ಸೀನಿಯರ್ ವಿಭಾಗದಲ್ಲಿ ಪಾಲ್ಗೊಂಡಿದ್ದರು. ಕನ್ಯಾಕುಮಾರಿ ಮತ್ತು ಶ್ರೀನಗರದಲ್ಲಿ ನಡೆದ ಸಬ್-ಜೂನಿಯರ್ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದರು.
.jpg)







