ಪಾಕ್ ನನ್ನ ತಂದೆಯನ್ನೂ ಗಲ್ಲಿಗೇರಿಸಬಹುದು: ಬಂಧಿತ ಬಿಎಸ್ಎಫ್ ಯೋಧನ ಪುತ್ರ ಅಮ್ರಿಕ್

ಸುರ್ಜಿತ್ ಸಿಂಗ್ ಅವರ ಭಾವಚಿತ್ರದೊಂದಿಗೆ ಅಮ್ರಿಕ್,ಅಂಗ್ರೇಜ್ ಕೌರ್ ಮತು ಅಮ್ರಿಕ್ ಪುತ್ರ ರಮಣ್ ಸಿಂಗ್
ಫರೀದ್ಕೋಟ್,ಎ.16: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ಅವರಿಗೆ ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿರುವುದು ಪಂಜಾಬ್ನ ಫರೀದ್ಕೋಟ್ನಲ್ಲಿರುವ ಬಂಧಿತ ಬಿಎಸ್ಎಫ್ ಯೋಧ ಸುರ್ಜಿತ್ ಸಿಂಗ್ ಅವರ ಕುಟುಂಬವನ್ನು ಭೀತಿಯ ಮಡುವಿನಲ್ಲಿ ತಳ್ಳಿದೆ.
1971ರ ಯುದ್ಧದ ಸಂದರ್ಭದಲ್ಲಿ ಜಮ್ಮುವಿನ ಸಾಂಬಾ ವಿಭಾಗದಲ್ಲಿ ಪಾಕಿಸ್ತಾನಿ ಸೇನೆಯಿಂದ ಬಂಧಿಸಲ್ಪಟ್ಟಿದ್ದ ಸುರ್ಜಿತ್ ಸಿಂಗ್ ಅಂದಿನಿಂದಲೂ ಆ ರಾಷ್ಟ್ರದ ಜೈಲೊಂದರಲ್ಲಿ ಕೊಳೆಯುತ್ತಿದ್ದಾರೆ. ಅವರನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಿಸುವಂತೆ ಪುತ್ರ ಅಮ್ರಿಕ್ ಸಿಂಗ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೋರಿದ್ದಾರೆ.
ಅವರು ನನ್ನ ತಂದೆಯನ್ನೂ ಗಲ್ಲಿಗೇರಿಸುತ್ತಾರೆ. ಜಾಧವ್ಗೆ ವಿಧಿಸಲಾಗಿರುವ ಮರಣ ದಂಡನೆ ನಮ್ಮನ್ನು ತಲ್ಲಣಗೊಳಿಸಿದೆ. ನಾನು ಜನ್ಮ ನೀಡಿದ ತಂದೆಯನ್ನೆಂದೂ ನೋಡಿಲ್ಲ, ಆದರೆ ಅವರನ್ನು ಬಿಡುಗಡೆಗೊಳಿಸಲು ಕಂಬದಿಂದ ಕಂಬಕ್ಕೆ ಸುತ್ತುತ್ತಿದ್ದೇನೆ. ನಾನು ಸಾಯುವ ಮುನ್ನ ಅವರನ್ನೊಮ್ಮೆ ಅಪ್ಪಿಕೊಳ್ಳಲು ಬಯಸಿದ್ದೇನೆ ಎಂದು ಅಮ್ರಿಕ್ ಸ್ವರಾಜ್ಗೆ ಬರೆದಿರುವ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಸೋಮವಾರ ಸ್ವರಾಜ್ರನ್ನು ಭೇಟಿಯಾಗುವುದಾಗಿ ಅಮ್ರಿಕ್ ಹೇಳಿದರು.
ಸುರ್ಜಿತ್ ಸಿಂಗ್ ನಾಪತ್ತೆಯಾದಾದಗ ಅವರ ಪತ್ನಿ ಅಂಗ್ರೇಜ್ ಕೌರ್ಗೆ ಕೇವಲ 19 ವರ್ಷಗಳಾಗಿದ್ದವು. ಅವರ ಪಾಲಿಗೆ ಜಗತ್ತೇ ಬುಡಮೇಲಾಗುವ ಮುನ್ನ ಆಕೆ ಗಂಡುಮಗುವಿನ ತಾಯಿಯಾಗಿದ್ದರು. ಸುರ್ಜಿತ್ರ್ ದೇಶಪ್ರೇಮ ಇನ್ನೂ ತನಗೆ ನೆನಪಿದೆ. ಗಂಡನನ್ನು ಮತ್ತೆ ಕಣ್ಣಾರೆ ಕಾಣುತ್ತೇನೆಂಬ ಎಲ್ಲ ಆಸೆಗಳನ್ನೂ ತಾನು ಕಳೆದುಕೊಂಡಿದ್ದೇನೆ ಎಂದು ಕೌರ್ ಬಿಕ್ಕುತ್ತಲೇ ಹೇಳಿದರು.
ಕಾಣೆಯಾಗಿದ್ದ ಸುರ್ಜಿತ್ರನ್ನು ಪತ್ತೆ ಹಚ್ಚುವ ಭಾರತೀಯ ಸೇನೆಯ ಎಲ್ಲ ಪ್ರಯತ್ನಗಳೂ ವಿಫಲಗೊಂಡ ಬಳಿಕ 1974ರಲ್ಲಿ ಅವರ ಕುಟುಂಬಕ್ಕೆ ಅವರ ಮರಣ ಪ್ರಮಾಣಪತ್ರವನ್ನು ವಿತರಿಸಲಾಗಿತ್ತು ಮತ್ತು ಸಿಗಬೇಕಾಗಿದ್ದ ಎಲ್ಲ ಸೌಲಭ್ಯಗಳನ್ನು ನೀಡಲಾಗಿತ್ತು. ಆದರೆ ಸುರ್ಜಿತ್ ಕುಟುಂಬದ ಅದೃಷ್ಟ 2004ರಲ್ಲಿ ಸಣ್ಣದೊಂದು ತಿರುವು ಪಡೆದುಕೊಂಡಿತ್ತು. ಆಗ ಪಾಕಿಸ್ತಾನವು ಬಿಡುಗಡೆಗೊಳಿಸಿದ್ದ 36 ಭಾರತೀಯ ಕೈದಿಗಳ ಮೂಲಕ ಸುರ್ಜಿತ್ ಇನ್ನೂ ಬದುಕಿದ್ದಾರೆ ಮತ್ತು ಲಾಹೋರ್ನ ಕೋಟ್ ಲಖಪತ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು.
2005ರಲ್ಲಿ ತನ್ನ ತಂದೆಯ ಬಿಡುಗಡೆಗಾಗಿ ಆಗ್ರಹದೊಂದಿಗೆ ಅಮ್ರಿಕ್ ದಿಲ್ಲಿಯ ಜಂತರ್ ಮಂತರ್ನಲ್ಲಿ ಧರಣಿ ಕುಳಿತಿದ್ದಾಗ ಆಗಿನ್ನೂ ಬಿಜೆಪಿಯಲ್ಲಿಯೇ ಇದ್ದ ನವಜೋತ್ ಸಿಂಗ್ ಸಿಧು ಮತ್ತು ಇನ್ನೋರ್ವ ಬಿಜೆಪಿ ನಾಯಕಿ ಸ್ಮತಿ ಇರಾನಿ ಅವರಿಗೆ ಸಾಥ್ ನೀಡಿದ್ದರು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಅಮ್ರಿಕ್ ಭೇಟಿಯಾಗಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
2013ರಲ್ಲಿ ಪಾಕಿಸ್ತಾನವು ಬಿಡುಗಡೆಗೊಳಿಸಿದ್ದ ಇನ್ನೋರ್ವ ಕೈದಿ ಸುರ್ಜಿತ್ ಕ್ವೆಟ್ಟಾದ ಜೈಲಿನಲ್ಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದ.
ಪರಿಸ್ಥಿತಿ ನಿರಾಶಾದಾಯಕವಾಗಿ ಕಂಡು ಬರುತ್ತಿದ್ದರೂ ತಂದೆಯ ಬಿಡುಗಡೆಯಾಗುವರೆಗೆ ತನ್ನ ಹೋರಾಟವನ್ನು ಕೈಬಿಡಲು ಅಮ್ರಿಕ್ ಸಿದ್ಧರಿಲ್ಲ.