"ಸ್ಮಾರ್ಟ್‌ಸಿಟಿ"ಗೆ ಅಪವಾದದ ಮಹಾಲಕ್ಷ್ಮಿ ಬಡಾವಣೆ 2ನೇ ಹಂತ
ಮೂಲಭೂತ ಸೌಕರ್ಯವಿಲ್ಲದ ನರಳುತ್ತಿರುವ ನಾಗರಿಕರು

ತುಮಕೂರು, ಎ.16: ನಗರದ ಬಿ.ಎಚ್.ರಸ್ತೆಗೆ ಕೂಗಳತೆಯ ದೂರದಲ್ಲಿರುವ ಮಹಾಲಕ್ಷ್ಮಿ ಬಡಾವಣೆಯ ಎರಡನೇ ಬ್ಲಾಕ್ ಸಮರ್ಪಕ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಬಳಲುತ್ತಿದ್ದು, ನಗರಪಾಲಿಕೆ ಸೂಕ್ತ ಪರಿಹಾರ ಒದಗಿಸುವಂತೆ ಬಡಾವಣೆಯ ನಾಗರಿಕರು ಒತ್ತಾಯಿಸಿದ್ದಾರೆ.
ಬಟವಾಡಿಯ ಪೆಟ್ರೋಲ್ ಮಿರ್ಜಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮಹಾಲಕ್ಷ್ಮಿ ಬಡಾವಣೆ 2ನೇ ಹಂತ ಪ್ರಸ್ತುತ 35ನೇ ವಾರ್ಡಿಗೆ ಸೇರುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿರುವ ಈ ಬಡಾವಣೆಯಲ್ಲಿ ಸರಿಯಾದ ರಸ್ತೆಗಳಿಲ್ಲ. ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, 2ನೇ ಹಂತದಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳ ವಾಸವಾಗಿದ್ದು, ಇಡೀ ಬಡಾವಣೆಯಲ್ಲಿ ಚರಂಡಿ ಎಂಬುದೇ ಇಲ್ಲ. ಇದರಿಂದಾಗಿ ಮನೆಯ ನೀರು ರಸ್ತೆಯಲ್ಲಿಯೇ ನಿಂತು ಹಂದಿಗಳ ಆವಾಸ ಸ್ಥಾನವಾಗಿದೆ. ಕೊಳಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್, ಚಿಕನ್ ಗುನ್ಯಾ, ಮಲೇರಿಯಾ ಮತ್ತಿತರರ ಸಾಂಕ್ರಾಮಿಕ ರೋಗಗಳು ಹರಡಿ ಹಲವರು ರೋಗ, ರುಜಿನಗಳಿಗೆ ತುತ್ತಾಗುತ್ತಿದ್ದಾರೆ.
ನೂರೈವತ್ತಕ್ಕೂ ಹೆಚ್ಚು ಮನೆಗಳಿರುವ ಈ ಬಡಾವಣೆಗೆ ಕುಡಿಯಲು ಹೇಮಾವತಿ ನೀರಿನ ವ್ಯವಸ್ಥೆಯಿಲ್ಲ. ಬಡಾವಣೆಯಲ್ಲಿ ಈ ಹಿಂದೆ ಕೊರೆದಿದ್ದ ಕೊಳವೆಬಾವಿ ಬತ್ತಿ ಹೋಗಿದ್ದು, ಸಂಸದರ ಒತ್ತಾಯದ ಮೇರೆಗೆ ನಗರಪಾಲಿಕೆ ಬರ ಪರಿಹಾರ ನಿರ್ವಹಣೆ ಅಡಿಯಲ್ಲಿ ಕೊಳವೆ ಬಾವಿ ಕೊರೆದಿದ್ದು,15 ದಿನ ಕಳೆದರೂ ಪಂಪು ಮೋಟಾರು ಅಳವಡಿಸಿಲ್ಲ. ಇದರಿಂದ ಬಡಾವಣೆಯ ಜನತೆ ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗೆ ಖಾಸಗಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.
ಬಡಾವಣೆಯ ಸಮಸ್ಯೆಯ ಬಗ್ಗೆ ನಾಗರಿಕರು ಸ್ಥಳೀಯ ಕೌನ್ಸಿಲರ್ ಲೋಕೇಶ್, ಶಾಸಕರಾದ ಡಾ.ರಫೀಕ್ ಅಹಮದ್, ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ನಗರಪಾಲಿಕೆಯ ಅಧಿಕಾರಿಗಳಿಗೆ ಖುದ್ದು ಭೇಟಿಯಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರು ನಗರಪಾಲಿಕೆಯ ಮೇಲೆ ಒತ್ತಡ ಹಾಕಿ ಕೊಳವೆ ಬಾವಿ ಕೊರೆಸಿದ್ದರೂ ಪಂಪು ಮೋಟಾರು ಅಳವಡಿಸಿದ ಕಾರಣ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡುಗಳ ವಿಂಗಡಣೆ ವೇಳೆ ಬಡಾವಣೆ 26ನೇ ವಾರ್ಡಿಗೆ ಸೇರಿರುವ ಹಿನ್ನೆಲೆಯಲ್ಲಿ ಹಾಲಿ ಬಡಾವಣೆ ಸೇರಿರುವ 35ನೇ ವಾರ್ಡಿನ ಕೌನ್ಸಿಲ್ ಲೋಕೇಶ್ ಈ ಭಾಗದ ಅಭಿವೃದ್ದಿಗೆ ಗಮನಹರಿಸಿಲ್ಲ ಎಂಬುದು ಬಡಾವಣೆಯ ನಾಗರಿಕರ ಆರೋಪವಾಗಿದೆ.
ಬಡಾವಣೆಯ ನಾಗರಿಕರಾದ ಬಸವರಾಜು ಮಾತನಾಡಿ, ಚರಂಡಿಯಿಲ್ಲದೆ ದೊಡ್ಡ ಗುಂಡಿಗಳು ಬಿದ್ದು, ಕೊಳಚೆ ನೀರು ನಿಂತಿದೆ. ರಾತ್ರಿ ವೇಳೆ ಕಿಟಕಿ ತೆಗೆದು ಮಲಗಿದರೆ ಸೊಳ್ಳೆಗಳ ಕಾಟ. ಜೊತೆಗೆ ಕೊಳೆತ ನೀರಿನ ಕೆಟ್ಟವಾಸನೆ. ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದ್ದು, ಮಹಾಲಕ್ಷ್ಮಿ ಬಡಾವಣೆ ಇದಕ್ಕೆ ಅಪವಾದದಂತಿದೆ. ನಗರಪಾಲಿಕೆ ಶೀಘ್ರ ಬಡಾವಣೆಗೆ ಅಗತ್ಯವಿರುವ ನಾಗರಿಕ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಬಡಾವಣೆಯ ನಾಗರಿಕರಾದ ಪೂರ್ಣಿಮಾ ಮಾತನಾಡಿ, "ನಾವು ಈ ಬಡಾವಣೆಯಲ್ಲಿ 25 ವರ್ಷಗಳಿಂದ ವಾಸಿಸುತ್ತಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಸೊಳ್ಳೆಗಳಿಂದ ಡೆಂಗ್, ಚಿಕನ್ ಗುನ್ಯಾ, ಮಲೇರಿಯಾ ರೋಗಗಳಿಗೆ ನಾವು ತುತ್ತಾಗುತ್ತಿದ್ದು, ನಗರಪಾಲಿಕೆಯವರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕೌನ್ಸಿಲರ್ ಲೋಕೇಶ್, ಅನುದಾನದ ಕೊರತೆಯಿಂದ ಬಡಾವಣೆಗೆ ನಾಗರಿಕ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಲಿನಲ್ಲಿ ಅನುದಾನದಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ದಿಯಲ್ಲಿ ತಾರತಮ್ಯ ಮಾಡಿಲ್ಲ. ಹೊಸದಾಗಿ ಕೊಳವೆ ಬಾವಿ ಕೊರೆಸಿದ್ದು, ಶೀಘ್ರವೇ ಪಂಪ್ ಮೋಟಾರ್ ಅಳವಡಿಸಿ ನೀರಿನ ಸಮಸ್ಯೆ ನೀಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.







