ಮೂಡುಬಿದಿರೆ: ತಂದೆಯನ್ನು ಕೊಂದ ಪುತ್ರನ ಬಂಧನ

ಮಂಗಳೂರು, ಎ.16: ಮೂಡುಬಿದಿರೆ ಸಮೀಪದ ಹೊಸಬೆಟ್ಟು ಗ್ರಾಮದ ಕರಿಂಗಾನ ಎಂಬಲ್ಲಿ ವೃದ್ಧ ಪೌಲ್ ಗೋವಿಯಸ್ (82) ಎಂಬವರನ್ನು ಕೊಂದ ಮತ್ತು ಅವರ ಪುತ್ರ ಸ್ಟಾನಿ ಗೋವಿಯಸ್ (45)ರ ಕೊಲೆಗೆ ಯತ್ನಿಸಿದ ಆರೋಪಿ ಡಾಲ್ಫಿ ಗೋವಿಯಸ್ (35) ಎಂಬಾತನನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.
ರವಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆಸ್ತಿ ವಿಚಾರಕ್ಕೆ ಸಂಬಂಧಿಸಿ ಎ.14ರಂದು ರಾತ್ರಿ ಈ ಕೊಲೆ ನಡೆದಿದೆ. ಕೊಲೆ ಮತ್ತು ಕೊಲೆಯತ್ನ ಆರೋಪ ಎದುರಿಸುತ್ತಿರುವ ಡಾಲ್ಫಿ ಗೋವಿಯಸ್ ಕೊಲೆಯಾದ ಪೌಲ್ ಗೋವಿಯಸ್‌ರ ಪುತ್ರನಾಗಿದ್ದಾನೆ. ಮಾರಣಾಂತಿಕ ಹಲ್ಲೆಗೊಳಗಾದ ಸ್ಟಾನಿ ಗೋವಿಯಸ್ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಗುಡ್‌ಫ್ರೈಡೆ ನಿಮಿತ್ತ ಶುಕ್ರವಾರ ಸ್ಥಳೀಯ ಚರ್ಚ್‌ನಲ್ಲಿ ಪೂಜಾ ಕಾರ್ಯಕ್ರಮವಿದ್ದ ಕಾರಣ ತನ್ನ ತಂದೆ ಪೌಲ್ ಗೋವಿಯಸ್‌ರನ್ನು ಹಿರಿಯ ಪುತ್ರ ಸ್ಟಾನಿ ಗೋವಿಯಸ್ ಮನೆಯಲ್ಲಿ ಬಿಟ್ಟು ಹೊರಗಿನಿಂದ ಬೀಗ ಹಾಕಿ ಹೋಗಿದ್ದರು. ಈ ಸಂದರ್ಭ ಒಳಗೆ ನುಗ್ಗಿದ ಆರೋಪಿ ಡಾಲ್ಫಿ ಗೋವಿಯಸ್ ತಂದೆಯ ಕಪಾಳಕ್ಕೆ ಹೊಡೆದು ಗೋಡೆಗೆ ತಲೆಯನ್ನು ಜಜ್ಜಿ ಕತ್ತು ಹಿಸುಕಿ ಕೊಲೆಗೈದಿದ್ದ. ಬಳಿಕ ಮನೆಯ ಹಿಂಬದಿ ಕಾದು ಕುಳಿತು ಮನೆಗೆ ಮರಳುತ್ತಿದ್ದ ಅಣ್ಣ ಸ್ಟಾನಿ ಗೋವಿಯಸ್‌ನ ತಲೆಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಸ್ಟಾನಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ರವಿವಾರ ಮಧ್ಯಾಹ್ನ ಅಜೆಕಾರು ಬಳಿ ಬಂಧಿಸಲಾಯಿತು ಎಂದು ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.







