ಶಾಸನ ರೂಪಿಸುವ ಜಾಗಕ್ಕೆ ‘ಅಹಿಂದ’ ಸಮುದಾಯ ಬರಲಿ: ಸಿ.ಎಸ್.ದ್ವಾರಕನಾಥ್

ಬೆಂಗಳೂರು, ಎ.16: ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಶಾಸನ ರೂಪಿಸುವ ಜಾಗಕ್ಕೆ ಬಂದಾಗ ಮಾತ್ರ ಅಹಿಂದ ಜನಾಂಗದವರು ಎಲ್ಲ ಕ್ಷೇತ್ರಗಳಿಗೂ ಕಾಲಿಡಲು ಸಾಧ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಬಲಿಜ ಮಹಾಸಭಾ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಇಪ್ಪತೈದು ವರ್ಷಗಳ ಹಿಂದೆ ಬಲಿಜ ಸಮುದಾಯವನ್ನು 2 ಎ ಯಿಂದ 3 ಎಗೆ ಸೇರಿಸಲಾಯಿತು. ಇದರಿಂದ, ಬಲಿಜ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಅಂಬೇಡ್ಕರ್ ಆಶಯದಂತೆ ಅಹಿಂದ ಜನಾಂಗದವರು ಶಾಸನ ರೂಪಿಸುವ ಜಾಗಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಸಂಘಟನೆಗೆ ಶಕ್ತಿ ಇದೆ ಎಂಬುದು ಈಗಾಗಲೇ ನಮಗೆಲ್ಲರಿಗೂ ಗೊತ್ತಾಗಿದೆ. ಹೀಗಾಗಿ, ಬಲಿಜ ಸಮುದಾಯವನ್ನು ಮತ್ತಷ್ಟು ಸಂಘಟಿಸಿ ಬಲಿಜ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಇನ್ನು ಮುಂದೆ ಬಲಿಜ ಮಹಾಸಭಾದ ವತಿಯಿಂದ ಬಲಿಜ ಸಮುದಾಯದ 50 ವಿದ್ಯಾರ್ಥಿಗಳನ್ನು ಪಿಜಿ ಹಾಸ್ಟೇಲ್‌ನಲ್ಲಿಟ್ಟು ಓದಿಸುತ್ತೇವೆ. ಹಾಗೆಯೇ ಐಎಎಸ್, ಕೆಎಎಸ್ ಓದುವ ಬಲಿಜ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸೆಂಟರ್ ಸ್ಥಾಪಿಸಲಾಗುವುದು ಹಾಗೂ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಬಲಿಜ ಸಮುದಾಯಕ್ಕೆ ಕಡಿಮೆ ಬಡ್ಡಿ ತೆಗೆದುಕೊಂಡು ಸಾಲ ನೀಡಲಾಗುವುದು ಎಂದು ಹೇಳಿದರು.
ಬಲಿಜ ಸಮುದಾಯದ ಬಹುದೊಡ್ಡ ಸಮಾವೇಶವನ್ನು ಮೇ 28ರಂದು ಮಾಡಲು ನಿರ್ಧರಿಸಿದ್ದು, ಅದೇ ದಿನವೇ ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮನೋಹರ್, ಬಲಿಜ ಸಮುದಾಯದ ಮುಖಂಡ ನಾಗರಾಜ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಾಪರೆಡ್ಡಿ, ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮುನಿರಾಜು, ಪ್ರಮೀಳಾ ನಾಯ್ಡು, ಗೋವಿಂದರಾಜು, ಕಳ್ಳಪಳ್ಳಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.







