ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ವೈಫಲ್ಯ : ಗುಪ್ತಚರ ಸಂಸ್ಥೆಗಳಿಗೆ ಸಂಸದೀಯ ಸಮಿತಿ ತರಾಟೆ

ಹೊಸದಿಲ್ಲಿ,ಎ.16: ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಪಠಾಣ್‌ಕೋಟ್,ಉಡಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ವೈಫಲ್ಯಕ್ಕಾಗಿ ಗುಪ್ತಚರ ಸಂಸ್ಥೆಗಳನ್ನು ತರಾಟೆಗೆತ್ತಿಕೊಂಡಿದೆ. ಈ ದಾಳಿಗಳು ಸಂಸ್ಥೆಗಳಲ್ಲಿಯ ನ್ಯೂನತೆಗಳನ್ನು ಬಹಿರಂಗಗೊಳಿಸಿವೆ ಮತ್ತು ಅವುಗಳ ವೈಫಲ್ಯದ ಯಾವುದೇ ವಿಶ್ಲೇಷಣೆ ನಡೆದಿಲ್ಲ ಎಂದು ಹೇಳಿದೆ.
ಪಠಾಣ್‌ಕೋಟ ವಾಯುನೆಲೆಯ ಮೇಲೆ ದಾಳಿ ನಡೆದು ಈಗಾಗಲೇ ಒಂದು ವರ್ಷ ಉರುಳಿದೆ,ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಮಿತಿಯು ಬೆಟ್ಟುಮಾಡಿದೆ.
ಗಡಿಪ್ರದೇಶಗಳಲ್ಲಿಯ ಗುಪ್ತಚರ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಲು ಸಾಧ್ಯವಾಗುವಂತೆ ಆದಷ್ಟು ಶೀಘ್ರ ತನಿಖೆಯನ್ನು ಪೂರ್ಣಗೊಳಿಸುವಂತೆ ಗೃಹ ಸಚಿವಾಲಯವು ಎನ್‌ಐಎಗೆ ನಿರ್ದೇಶ ನೀಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಗಡಿಯಲ್ಲಿ ನುಸುಳುವಿಕೆಯ ಪ್ರಮಾಣದಲ್ಲಿ ದಿಢೀರ್‌ನೆ ಭಾರೀ ಹೆಚ್ಚಳವನ್ನು ಬೆಟ್ಟುಮಾಡಿರುವ ಸಮಿತಿಯು, ಈ ಬಗ್ಗೆ ಸರಕಾರವು ಸಮಗ್ರ ತನಿಖೆಯನ್ನು ನಡೆಸಲೇಬೇಕು ಮತ್ತು ನುಸುಳುಕೋರರು ಬಳಸಿಕೊಳ್ಳುತ್ತಿರುವ ನಿಯಂತ್ರಣ ರೇಖೆಯಲ್ಲಿನ ಸುಲಭಭೇದ್ಯ ತಾಣಗಳನ್ನು ಪತ್ತೆ ಹಚ್ಚಬೇಕು ಎಂದಿದೆ.
ಗಡಿಯಾಚೆಯಿಂದ ಸುರಂಗಗಳ ಮೂಲಕ ನುಸುಳುವಿಕೆ ಘಟನೆಗಳು ಹೆಚ್ಚುತ್ತಿವೆ ಎಂದೂ ಹೇಳಿರುವ ಸಮಿತಿಯು, ಭವಿಷ್ಯದಲ್ಲಿ ಇದು ನುಸುಳುಕೋರರ ಪ್ರಮುಖ ಕಾರ್ಯತಂತ್ರವಾಗಬಹುದು ಮತ್ತು ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ಸರಕಾರವು ಪೂರ್ವನಿಯಾಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಅದು ಸುರಂಗ ಪತ್ತೆ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಿರುವ ಇತರ ದೇಶಗಳ ನೆರವು ಪಡೆದುಕೊಳ್ಳಬೇಕು ಎಂದಿದೆ.







