ಯೋಧನ ಆತ್ಮಹತ್ಯೆ ಪ್ರಕರಣ : ಪತ್ರಕರ್ತೆ,ನಿವೃತ್ತ ಸೇನಾಧಿಕಾರಿಯ ಜಾಮೀನು ಅರ್ಜಿಗಳು ತಿರಸ್ಕೃತ

ನಾಸಿಕ್,ಎ.16: ಲಾನ್ಸ್ ನಾಯ್ಕ್ ಡಿ.ಎಸ್.ರಾಯ್ ಮ್ಯಾಥ್ಯೂ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಆರೋಪವನ್ನೆದುರಿಸುತ್ತಿರುವ ದಿಲ್ಲಿ ಮೂಲದ ಸುದ್ದಿ ಜಾಲತಾಣ ವೊಂದರ ಪತ್ರಕರ್ತೆ ಪೂನಂ ಅಗರವಾಲ್ ಮತ್ತು ನಿವೃತ್ತ ಸೇನಾಧಿಕಾರಿ ದೀಪಚಂದ್ ಕಾಶ್ಮೀರಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಇಲ್ಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದೆ.
ಸೇನೆಯಲ್ಲಿ ನಡೆಯುತ್ತಿದೆ ಎನ್ನಲಾದ ‘ಬಡಿ (ಆರ್ಡರ್ಲಿ) ’ ವ್ಯವಸ್ಥೆಯ ದುರುಪಯೋಗವನ್ನು ಬಹಿರಂಗಗೊಳಿಸಿದ್ದ ಸುದ್ದಿ ಜಾಲತಾಣದ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ಮ್ಯಾಥ್ಯೂ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಗರವಾಲ್ ಮತ್ತು ಕಾಶ್ಮೀರಸಿಂಗ್ ಅವರ ಬಂಧನ ಅಗತ್ಯವಾಗಿದೆ ಎಂದು ಪ್ರಾಸಿಕ್ಯೂಷನ್ ಶನಿವಾರ ನ್ಯಾಯಾಲಯಕ್ಕೆ ಮನದಟ್ಟು ಮಾಡಿದ ನಂತರ ನ್ಯಾ.ಎಂ.ಎಸ್.ಪಠಾಣ್ ಅವರು ಅವರಿಬ್ಬರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದರು.
ಅಗರವಾಲ್ ಅವರು ಸೇನಾ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಕುಟುಕು ಕಾರ್ಯಾಚರಣೆಯನ್ನು ನಡೆಸಲು ಬಳಸಿದ್ದ ಕ್ಯಾಮರಾ ಮತ್ತು ಮೆಮರಿ ಕಾರ್ಡ್‌ನ್ನು ವಶಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದೂ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.
ಕುಟುಕು ಕಾರ್ಯಾಚರಣೆಯ ವೀಡಿಯೊ ಬಹಿರಂಗಗೊಂಡ ಬೆನ್ನಿಗೇ ಫೆ.25ರಿಂದ ನಾಪತ್ತೆಯಾಗಿದ್ದ ಮ್ಯಾಥ್ಯೂ ಶವ ಮಾ.2ರಂದು ಕೊಳೆತ ಸ್ಥಿತಿಯಲ್ಲಿ ಇಲ್ಲಿಯ ದೇವಲಾಲಿಯ ಸೇನಾ ಬ್ಯಾರಕ್‌ನಲ್ಲಿ ಪತ್ತೆಯಾಗಿತ್ತು.







