ಪ್ರಣೀತ್ ಸಿಂಗಾಪುರ ಸೂಪರ್ ಚಾಂಪಿಯನ್
ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ಗೆ ಸೋಲು

ಸಿಂಗಾಪುರ, ಎ.16: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಬಿ.ಸಾಯಿ ಪ್ರಣೀತ್ ಅವರು ಸಿಂಗಾಪುರ ಓಪನ್ ಸೂಪರ್ ಸೀರಿಸ್ ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಅವರನ್ನು ಮಣಿಸಿ ಮೊದಲ ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ವಿಶ್ವದ ನಂ.30 ಆಟಗಾರ ಪ್ರಣೀತ್ ಅವರು ನಂ.29 ಶ್ರೀಕಾಂತ್‌ರನ್ನು 17-21, 21-17, 21-12 ಅಂತರದಲ್ಲಿ ಸೋಲಿಸಿ ಸಿಂಗಾಪುರ ಓಪನ್ ಸೂಪರ್ ಸೀರಿಸ್ ಚಾಂಪಿಯನ್ ಎನಿಸಿಕೊಂಡರು.
ಪ್ರಣೀತ್ ಕಳೆದ ವರ್ಷ ಕೆನಡಾ ಓಪನ್ ಗ್ರಾನ್ ಪ್ರಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಇತ್ತೀಚೆಗೆ ಲಕ್ನೊದಲ್ಲಿ ನಡೆದ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್‌ನ ಫೈನಲ್‌ನಲ್ಲಿ ಶ್ರೀಕಾಂತ್ ವಿರುದ್ಧ ಜಯ ಗಳಿಸಿದ್ದರು.
ಶ್ರೀಕಾಂತ್ ಮತ್ತು ಪ್ರಣೀತ್ ಈ ತನಕ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪೈಕಿ ನಾಲ್ಕರಲ್ಲಿ ಪ್ರಣೀತ್ ಗೆಲುವು ಸಾಧಿಸಿದ್ದಾರೆ. ಸಿಂಗಾಪುರ ಓಪನ್‌ನಲ್ಲಿ ಪ್ರಣೀತ್ ಮತ್ತು ಶ್ರೀಕಾಂತ್ ಅವರ ಸೆಣಸಾಟ 54 ನಿಮಿಷಗಳಲ್ಲಿ ಮುಗಿಯಿತು.
ಮೊದಲ ಬಾರಿ ಸಿಂಗಾಪುರ ಭಾರತದ ಇಬ್ಬರು ಆಟಗಾರರು ಫೈನಲ್ ಪ್ರವೇಶಿಸಿ ಮೊದಲ ಹಾಗೂ ಎರಡನೆ ಸ್ಥಾನ ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ.
ಪಿ.ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಇಬ್ಬರು ಆಟಗಾರರು ಶನಿವಾರ ಫೈನಲ್ ತಲುಪಿದ್ದರು. ಸೆಮಿಫೈನಲ್‌ನಲ್ಲಿ ಮಾಜಿ ನಂ.3 ಆಟಗಾರ ಶ್ರೀಕಾಂತ್ ಅವರು ಇಂಡೊನೇಷ್ಯಾದ ಅಂಟನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಜಯ ಗಳಿಸಿ ಫೈನಲ್ ತಲುಪಿದ್ದರು.
ಪ್ರಣೀತ್ ಅವರು ದಕ್ಷಿಣ ಕೊರಿಯಾದ ಲಿ ಡಾಂಗ್ ಕುಯೆನ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.
‘‘ ಪ್ರತಿದಿನ ಆಡುವ ಆಟಗಾರರ ವಿರುದ್ಧ ಆಡುವುದು ಕಷ್ಟ. ಶ್ರೀಕಾಂತ್ ವಿರುದ್ಧ ಗೆಲುವಿನ ಹಿನ್ನೆಲೆಯಲ್ಲಿ ಸಂತಸವಾಗಿದೆ. ಇಲ್ಲಿ ಭಾರತೀಯ ಆಟಗಾರರಿಗೆ ಉತ್ತಮ ಬೆಂಬಲ ದೊರೆಯುತ್ತಿದೆ ’’ -ಸಾಯಿಪ್ರಣೀತ್ , ಸಿಂಗಾಪುರ ಸೂಪರ್ ಸೀರಿಸ್ ಚಾಂಪಿಯನ್







