ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಸಂಗೀತ ಕಲಿಕೆ ಅಗತ್ಯ: ಡಾ.ಸುಮಿತ್ರಾ

ದಾವಣಗೆರೆ, ಎ.16: ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಸಂಗೀತ ಕಲಿಯುವುದು ಅಗತ್ಯವಾಗಿದೆ ಎಂದು ನಾಡಿನ ಖ್ಯಾತ ಹಿರಿಯ ಗಾಯಕಿ ನಾಡೋಜ ಡಾ.ಬಿ.ಕೆ.ಸುಮಿತ್ರಾ ಹೇಳಿದರು.
ಬೆಂಗಳೂರಿನ ಕರ್ನಾಟಕ ಸುಗಮ ಸಂಗೀತ ಪರಿಷತ್ ಮತ್ತು ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯುತ್ತಿರುವ ಗೀತಗಾಯನ ತರಬೇತಿ ಶಿಬಿರ ಸಮಾರೋಪ ನುಡಿಗಳನ್ನಾಡಿದ ಅವರು, ಸಂಗೀತ ಕಲಿಕೆಯಿಂದ ಮಾನಸಿಕ ನೆಮ್ಮದಿ ಪಡೆಯಬಹುದು. ಕಲಾಕುಂಚ ಹಮ್ಮಿಕೊಂಡ ಈ ಕಾರ್ಯ ಶ್ಲಾಘನೀಯವೆಂದರು.
ಖ್ಯಾತ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ ಕುರ್ಕಿ ಮಾತನಾಡಿದರು.
ಕಲಾಕುಂಚದ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ವೀಣಾ ಕೃಷ್ಣಮೂರ್ತಿ, ಕಲಾಕುಂಚ ಮಹಿಳಾ ವಿಬಾಗದ ಅಧ್ಯಕ್ಷೆ ರೇಖಾ ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿ, ಜಿ.ಬಿ.ಲೋಕೇಶ್, ಟಿ.ಆರ್.ಹೇಮಂತ್‌ಕುಮಾರ್, ಅಮಿತ್‌ಶೇಖರ್ ಮೊದಲಾದವರು ಪಾಲ್ಗೊಂಡಿದ್ದರು.





