ಅಧಿಕಾರಿ ಸೋಗಿನಲ್ಲಿ ಹಣ ವಸೂಲಿ ಮಾಡಿ ವಂಚಿಸಿದ ಅಪರಿಚಿತ: ವರ್ತಕರ ಆರೋಪ

ಮೂಡಿಗೆರೆ, ಎ.16: ಕೆಲವು ಹೋಟೆಲ್ ಮತ್ತು ಅಂಗಡಿ ಮಾಲಕರ ಬಳಿಗೆ ತೆರಳಿ ಅಪರಿಚಿತ ವ್ಯಕ್ತಿಯೋರ್ವ ತಾನು ಆಹಾರ ಇಲಾಖೆಯ ಅಧಿಕಾರಿ ಎಂದು ನಂಬಿಸಿ ಹಣ ವಸೂಲಿ ಮಾಡಿ ಪರಾರಿಯಾಗಿರುವ ಘಟನೆ ಎ.14ರಂದು ಕೊಟ್ಟಿಗೆಹಾರ ವೃತ್ತದಲ್ಲಿ ನಡೆದಿದೆ.
ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಸಮೀಪದ ಅಂಗಡಿಗಳಲ್ಲಿ ಎಂ.ಪಿ.ಉಮೇಶ್ ಎಂಬ ಹೆಸರಿನ ವ್ಯಕ್ತಿಯೋರ್ವ ತಾನು ಆಹಾರ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಪರವಾನಿಗೆ ತೋರಿಸುವಂತೆ ಕೇಳಿದ್ದಾನೆ. ಕೆಲವರು ಪಂಚಾಯತ್‌ನಿಂದ ಪಡೆದ ಲೈಸೆನ್ಸ್ ತೋರಿಸಿದರೂ, ಒಂದೊಂದು ಅಂಗಡಿಗೆ 300 ರೂ.ಗಳಂತೆ ಕೈ ಬರಹದ ರಶೀದಿ ನೀಡಿದ್ದಾನೆ. ತಾನು ಹುಬ್ಬಳ್ಳಿ ಮೂಲದವನಾಗಿದ್ದು, ಮಂಗಳೂರು ಶಾಖೆಯಿಂದ ಮೂಡಿಗೆರೆಗೆ ಹಾಕಿದ್ದಾರೆ ಎಂದಿದ್ದಾನೆ. ವರ್ತಕರು ನಂಬಿ ಹಣ ನೀಡಿದ್ದಾರೆ.
ಕೊಟ್ಟಿಗೆಹಾರದ ಹೋಟೆಲ್ ಮಾಲಕ ಪ್ರಭಾಕರ ಎಂಬವರು ಹೋಟೆಲ್ ನಡೆಸಲು ಪಂಚಾಯತ್‌ನಿಂದ ಪಡೆದ ಲೈಸೆನ್ಸ್ ತೋರಿಸಿದಾಗ ನಕಲಿ ಲೈಸೆನ್ಸ್ ಎಂದು ವಾದಿಸಿದ್ದಾನೆ. ಆಗ ಹೋಟೆಲ್ ಮಾಲಿಕ ಪ್ರಭಾಕರ್‌ಗೆ ಅನುಮಾನ ಬಂದಿದ್ದು, ಅಧಿಕಾರಿಯ ಸೋಗಿನಲ್ಲಿ ಬಂದಿದ್ದಾತನ ಗುರುತಿನ ಚೀಟಿ ಕೇಳಿದ್ದಾರೆ. ಗುರುತು ಚೀಟಿಯಲ್ಲಿ ಸರ್ಕಾರಿ ಮುದ್ರೆ ಹಾಗೂ ಭಾವಚಿತ್ರ, ಹೆಸರು ಎಂ.ಪಿ.ಉಮೇಶ್ ಎಂದು ಬರೆದಿದ್ದು, ನವದೆಹಲಿ ವಿಳಾಸ ಇತ್ತು. ಉದ್ಯೋಗಿಯ ಸಂಖ್ಯೆ 02215475 ಎಂದಿತ್ತು. ಅದರಲ್ಲಿ ಯಾವುದೇ ಸೀಲು ಅಥವಾ ಸಹಿ ಇರಲಿಲ್ಲ. ಹಿಂಭಾಗದಲ್ಲಿ ಗುರುತು ಪತ್ರದ ನಿಯಮಗಳು ಇರಲಿಲ್ಲ.
ಪ್ರಬಾಕರ್ ತಕ್ಷಣ ಗುರುತು ಪತ್ರದ ಪೋಟೊವನ್ನು ಮೊಬೈಲ್‌ನಲ್ಲಿ ತೆಗೆದಿದ್ದಾರೆ. ಇದರಿಂದಾಗಿ ವಿಚಲಿತಗೊಂಡ ಅಧಿಕಾರಿಯ ಸೋಗಿನಲ್ಲಿ ಬಂದಿದ್ದ ಅಪರಿಚಿತ ತಕ್ಷಣ ಪರಾರಿಯಾಗಿದ್ದಾಗಿ ಪ್ರಭಾಕರ್ ತಿಳಿಸಿದ್ದಾರೆ.

ಮೂಡಿಗೆರೆ ಆಹಾರ ಇಲಾಖೆಗೆ ತಪಾಸಣೆಗಾಗಿ ಹೊರಗಿನ ಜಿಲ್ಲೆಯ ಅಧಿಕಾರಿಗಳ ನೇಮಕವಾಗಿಲ್ಲ. ದೆಹಲಿ ಮತ್ತು ಮಂಗಳೂರಿನಿಂದ ವಿಶೇಷ ತಪಾಸಣಾ ದಳ ಬಂದರೆ ಮಾಹಿತಿ ಇರುತ್ತದೆ. ವರ್ತಕರನ್ನು ವಂಚಿಸುವ ಅಪರಿಚಿತರ ಮೇಲೆ ವರ್ತಕರು ಗಮನವಿಡಬೇಕು. ಲೈಸೆನ್ಸ್ ಆಥವಾ ಹಣ ಕೇಳಲು ಬಂದವರ ಬಗ್ಗೆ ತಕ್ಷಣ ಹತ್ತಿರದ ಪೋಲಿಸ್ ಠಾಣೆಗೆ ದೂರು ದಾಖಲಿಸಬಹುದು. ಜತೆಗೆ ಆಹಾರ ಮತ್ತು ಆರೋಗ್ಯ ನಿರೀಕ್ಷಕರ ಗಮನಕ್ಕೆ ತರಬಹುದು.
-ಸುಂದ್ರೇಶ್, ಆಹಾರ ನಿರೀಕ್ಷಕಕರು, ಮೂಡಿಗೆರೆ







