ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೃತ್ಯು: ಕೊಲೆ ಪ್ರಕರಣ ದಾಖಲು

ಮಂಗಳೂರು, ಎ.16: ವಾರದ ಹಿಂದೆ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯೇಂದ್ರ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮುಂಜಾನೆ ಸಾವಿಗೀಡಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದ ಆರೋಪಿ ಚಂದ್ರಹಾಸನ ವಿರುದ್ಧ ಬರ್ಕೆ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಲೇಡಿಹಿಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಜಯೇಂದ್ರ ಮತ್ತು ಚಂದ್ರಹಾಸ ಸ್ನೇಹಿತರಾಗಿದ್ದರೂ ಆಗಾಗ ವಿನಾ ಕಾರಣ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಎ.9ರಂದು ರಾತ್ರಿ ಜಯೇಂದ್ರ ಮತ್ತು ಚಂದ್ರಹಾಸರ ಮಧ್ಯೆ ಜಗಳವಾಗಿತ್ತು. ಗಾಯಗೊಂಡ ಜಯೇಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆ ಆರೋಪಿ ಚಂದ್ರಹಾಸನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರಗಿಸಿದ್ದರು. ಈ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಜಯೇಂದ್ರ ರವಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಆರೋಪಿ ಚಂದ್ರಹಾಸನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
Next Story





