ಕಲೆಗೆ ಶೀರ್ಷಿಕೆಯ ಹಂಗಿರದು: ಡಾ.ಎ.ಎಚ್.ರಾಜಾಸಾಬ್

ತುಮಕೂರು. ಎ.16: ಚಿತ್ರಕಲಾವಿದರು ಲೋಕಭಿನ್ನರು. ತಮ್ಮ ಸೃಜನಶೀಲತೆಯಲ್ಲಿ ಸದಾಕಾಲ ತಲ್ಲೀನರಾಗಿದ್ದು ವಿಶಿಷ್ಟವಾದುದನ್ನು ರಚಿಸುವುದರಲ್ಲಿ ತೊಡಗಿರುತ್ತಾರೆ. ಅವರ ಕಲೆಗೆ ಶೀರ್ಷಿಕೆಯ ಹಂಗಿರಬಾರದು ಎಂದು ತುಮಕೂರು ವಿವಿ ಕುಲಪತಿ ಡಾ.ಎ.ಎಚ್.ರಾಜಾಸಾಬ್ ತಿಳಿಸಿದ್ದಾರೆ.
ತುಮಕೂರು ವಿವಿ ಕಲಾ ಕಾಲೇಜಿನ ಡಾ.ಎಂ.ಎಸ್ ಸುಬ್ಬಲಕ್ಷ್ಮೀ ಲಲಿತಾ ಕಲಾವಿಭಾಗವು ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ಕಲಾವಿದೆ ಸಂಧ್ಯಾರಾಜ್ ಅವರ ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಒಬ್ಬೊಬ್ಬ ಸಹೃದಯನು ಕಲಾಕೃತಿಯನ್ನು ಗ್ರಹಿಸುವ ಮತ್ತು ಅರ್ಥೈಸುವ ರೀತಿ ಭಿನ್ನವಾಗಿರುತ್ತದೆ ಎಂದರು.
ಜಿಲ್ಲೆಯ ಕಲಾವಿದರ ಒದೊಂದು ಕಲಾಕೃತಿಗಳನ್ನು ವಿವಿ ಸಂಗ್ರಹಿಸಿ, ಸಂರಕ್ಷಿಸಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ಕಲಾವಿದರನ್ನು ಪರಿಚಯಿಸುವ ಹೊಣೆ ವಿವಿಯದ್ದು. ಕಲಾವಿದ ಅಗಲಿದರೂ ತನ್ನ ಕಲೆ ಮೂಲಕ ಚಿರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕುಲಸಚಿವ ಪ್ರೊ. ಎಂ ವೆಂಕಟೇಶ್ವರಲು ಮಾತನಾಡಿ, ಸಂಧ್ಯಾರಾಜ್ ಅವರ ಪಾರಂಪರಿಕ ಚಿತ್ರಕಲೆ ದೇವರು ಕೊಟ್ಟ ವರ. ಕಲಾಕೃತಿಗಳ ಮಾರಾಟದಿಂದ ಬಂದ ಹಣವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿರುವ ಸಂಧ್ಯಾರಾಜ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಗಾಂಧಿವಾದಿ ಎಂ.ಬಸವಯ್ಯ,ಸಂತ ಶಿಶುನಾಳ ಷರೀಫರ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂರ್ತಿಯವರು ಮಾತನಾಡಿದರು. ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ ಕರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಲಲಿತ ಕಲಾವಿಭಾಗದ ಮುಖ್ಯಸ್ಥ ವೆಂಕಟರೆಡ್ಡಿ ರಾಮರೆಡ್ಡಿ ಉಪಸ್ಥಿತರಿದ್ದರು







