ಮನುಷ್ಯ ಪ್ರೇಮಿ ಸಮುದಾಯ ಇಂದಿನ ಅಗತ್ಯ: ಸರ್ವಧರ್ಮ ಸೌಹಾರ್ದ ಕೂಟದಲ್ಲಿ ಸಚಿವ ರೈ
ಬೈಲುಪೇಟೆ ಉರೂಸ್ ಸಮಾರೋಪ

ಬಜ್ಪೆ, ಎ.16: ಜಮಾಲಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಬೈಲುಪೇಟೆ ಗುರುಪುರ ಇದರ ಉರೂಸ್ ಸಮಾರೋಪ ಸಮಾರಂಭ ಹಾಗೂ ಸರ್ವ ಧರ್ಮ ಸೌಹಾರ್ದ ಕೂಟ ರವಿವಾರ ದರ್ಗಾ ವಠಾರದಲ್ಲಿ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಧರ್ಮ-ಧರ್ಮ ಗಳ ಮಧ್ಯೆ ಅಪನಂಬಿಕೆಗಳು, ಸಣ್ಣ ವಿಚಾರಗಳಿಂದಾಗಿ ವಿವಾದಗಳಿಗೆ ಕಾರಣವಾಗುತ್ತಿವೆ. ಜಾತಿ ಧರ್ಮಗಳ ಎಲ್ಲೆ ಮೀರಿ ಮನುಷ್ಯ ಮನುಷ್ಯರನ್ನು ಪ್ರೀತಿಸಿದವರು ದೇವರನ್ನು ಪ್ರೀತಿಸಲು ಅಸಾಧ್ಯ. ಎಲ್ಲದಕ್ಕೂ ಮಿಗಿಲಾಗಿ ಮನುಷ್ಯರನ್ನು ಪ್ರೀತಿಸುವ ಏಕ ಸಮುದಾಯದ ಅಗತ್ಯತೆ ಇದೆ ಎಂದರು.
ಸಮಾರಂಭದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ , ಕೈಕಂಬ ಪೊಂಪೈ ಚರ್ಚ್ ನ ಧರ್ಮಗುರು ರೆ.ಫಾ. ಆ್ಯಂಟನಿ ಲೋಬೊ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಪ್ರೊಫೆಸರ್ ಅನೀಸ್ ಕೌಸರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಜಮಾಲಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ನ ಅಧ್ಯಕ್ಷ ಹಾಜಿ ಬಿ. ಝಕರಿಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಎ. ಮೊಯ್ದಿನ್, ಮಂಗಳೂರು ಉತ್ತರ ವಲಯ ಕ್ಷೇತ್ರ ಶಾಸಕ ಮೊಯ್ದಿನ್ ಬಾವ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಅಬ್ದುಲ್ ಖಾದರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಪೃಥ್ವಿರಾಜ್, ಮೂಡಾದ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಪೆರ್ಮುದೆ ದಿವ್ಯ ರೂಪ ಕನ್ ಸ್ಟ್ರಕ್ಷನ್ ಮಾಲಕ ಯಾದವ ಕೋಟ್ಯಾನ್, ಬಜ್ಪೆ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಮುನವ್ವರ್ ಕಿರಾಅತ್ ಪಠಿಸಿದರು. ಮುಹಮ್ಮದ್ ಕುಂಞಿ ಮಾಸ್ಟರ್ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಅಬ್ದುರ್ರಝಾಕ್ ವಂದಿಸಿದರು. ಡಾ. ಮಯಹಮ್ಮದ್ ಹಮೀದ್ ಮುಸ್ಲಿಯಾರ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಎಸ್ಕೆಎಸ್ಸೆಸ್ಸೆಫ್ ವಿಕಾಯ ಕಾರ್ಯಕರ್ತರು ಸ್ವಯಂಸೇವಕರಾಗಿ ಸಹಕರಿಸಿದರು.







