ಮೌನವಾಗಿರುವ ಕಲೆಯನ್ನು ರೂಢಿಸಿಕೊಳ್ಳಿ : ಬಿಜೆಪಿ ನಾಯಕರಿಗೆ ಮೋದಿ ಸಂದೇಶ

ಭುವನೇಶ್ವರ,ಎ.16: ಬಿಜೆಪಿ ನಾಯಕರು ಒಳ್ಳೆಯ ಮಾತುಗಾರರೇನೋ ಹೌದು, ಆದರೆ ಅಧಿಕಾರದಲ್ಲಿರುವಾಗ ಮೌನವಾಗಿರುವ ಕಲೆಯನ್ನು ಅವರು ರೂಢಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ಹೇಳಿದರು. ಪಕ್ಷೀಯರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಕುಟುಕಿದ ಅವರು, ಮೈಕ್ರೋಫೋನ್ ಜನರನ್ನು ಮಾತ ನಾಡುವಂತೆ ಬಲವಂತಗೊಳಿಸುವ ಯಂತ್ರವಲ್ಲ ಎಂದರು.
ಪ್ರಧಾನಿಯವರ ಭಾರೀ ರೋಡ್ ಶೋ ಜೊತೆ ಆರಂಭಗೊಂಡಿದ್ದ ಬಿಜೆಪಿಯ ಎರಡು ದಿನಗಳ ಕಾರ್ಯಕಾರಿಣಿ ಅವರ ಕಠಿಣ ಸಂದೇಶದೊಂದಿಗೆ ಕೊನೆಗೊಂಡಿತು. ವಿಜಯದ ಬಳಿಕ ನೆಮ್ಮದಿಯಾಗಿರಲು ಯಾವುದೇ ಅವಕಾಶವಿಲ್ಲ.ನವಭಾರತ ನಿರ್ಮಾಣಕ್ಕಾಗಿ ಒಡಿಶಾದ ಈ ನೆಲದಿಂದ ಪಕ್ಷವು ಪಣ ತೊಡಬೇಕು ಮತ್ತು ಉತ್ತಮ ಆಡಳಿತ ಮತ್ತು ಬಡವರಿಗೆ ಅಧಿಕಾರ ನವಭಾರತದ ಮಂತ್ರವಾಗಿರಬೇಕು ಎಂದು ಅವರು ಹೇಳಿದರು.
ಪಕ್ಷದ ಕಾರ್ಯಕರ್ತರು ಕಠಿಣ ಪರಿಶ್ರಮದೊದಿಗೆ ಜನರ ವಿಶ್ವಾಸವನ್ನು ಮರಳಿಸಬೇಕು ಎಂದರು.ಹಿರಿಯ ಕೇಂದ್ರ ಸಚಿವರು ಮತ್ತು 13 ಬಿಜೆಪಿ ಮುಖ್ಯಮಂತ್ರಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.
Next Story





