ಕನ್ನಡ ಬಾರದ ನಟಿಯರಿಂದ ಸಿನಿಮಾ ಕ್ಷೇತ್ರಕ್ಕೆ ಸಮಸ್ಯೆ: ಚಿತ್ರನಟ ಅಂಬರೀಶ್
ನಟಿ ಜಯಂತಿಗೆ ‘ಡಾ.ಬಿ.ಸರೋಜಿದೇವಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ಬೆಂಗಳೂರು, ಎ.16: ಕನ್ನಡ ಚಿತ್ರರಂಗದಲ್ಲಿ ಕನ್ನಡ ಬಾರದ ನಟಿಯರೇ ಬಹುಸಂಖ್ಯೆಯಲ್ಲಿ ಇರುವುದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಿದ್ಯಾಭವನ ವತಿಯಿಂದ ನಗರದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟಿ, "ಅಭಿನಯ ಶಾರದೆ" ಡಾ.ಜಯಂತಿಗೆ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ‘ಡಾ.ಬಿ.ಸರೋಜಿದೇವಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಇತ್ತೀಚಿಗೆ ಕನ್ನಡ ಸಿನಿಮಾಗಳಲ್ಲಿ ಉತ್ತರ ಭಾರತದ ನಟಿಯರೇ ಹೆಚ್ಚಿದ್ದಾರೆ. ಈ ನಟಿಯರಿಂದ ಕೇವಲ ಆಂಗಿಕ ನಟನೆಯನ್ನು ಮಾಡಿಸಿ, ಮಾತುಗಳನ್ನು ಸಂಪೂರ್ಣವಾಗಿ ಡಬ್ ಮಾಡಲಾಗುತ್ತಿದೆ. ಇದರಿಂದ ಸಿನಿಮಾದಲ್ಲಿ ಸಂಭಾಷಣೆ ಹಾಗೂ ನಟನೆ ಕಳಪೆಯಾಗಿ ಮೂಡಿಬರುತ್ತಿದೆ. ಈ ಬಗ್ಗೆ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.
ಹಿರಿಯ ನಟಿಯರಾದ ಜಯಂತಿ, ಸರೋಜಾದೇವಿ ತಮ್ಮ ಮೂವತ್ತು, ನಲವತ್ತು ವರ್ಷಗಳನ್ನು ದೇಶದ ಸಿನಿಮಾ ಜಗತ್ತಿಗಾಗಿ ಧಾರೆಯೆರೆದಿದ್ದಾರೆ. ಇವರ ನಟನೆಗೆ ಇವರೇ ಸಾಟಿಯೇ ಹೊರತು ಆ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇಂತಹ ನಟನೆಯ ಮೂಲಕವೇ ಸಿನಿಮಾ ಜಗತ್ತನ್ನು ಉಳಿಸಿ ಬೆಳೆಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಹಿಂದಿನ ದಿನಗಳಲ್ಲಿ ನಾಯಕಿಯರನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಿ ಯಶಸ್ವಿಯಾಗುತ್ತಿದ್ದೆವು. ಆದರೆ, ಈಗಿನ ನಟಿಯರ ಮೇಲೆ ಅಂತಹ ಭರವಸೆಯನ್ನು ಇಡಲು ಸಾಧ್ಯವಿಲ್ಲ. ಹಿರಿಯ ನಟಿಯರಾದ ಸರೋಜಾದೇವಿಯವರ ಅಭಿನಯವನ್ನು ನೋಡುವುದಕ್ಕಾಗಿ ಯೇ ಕಾತರದಿಂದ ಕಾಯುತ್ತಿದ್ದೆ. ಅವರ ನಟನೆಯ ಸಿನಿಮಾ ತೆರೆಗೆ ಬಂದ ಕೂಡಲೆ ಅಂಬರೀಶ್ ಜೊತೆಗೂಡಿ ಸಿನಿಮಾ ವೀಕ್ಷಿಸುತ್ತಿದ್ದೆ. ಅವರ ಸಿನಿಮಾಗಳನ್ನು ನೋಡಿದ ನೆನಪು ಈಗಲೂ ಹಸಿಯಾಗಿಯೇ ಇದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಭೂಷಣೆ ಡಾ.ಬಿ.ಸರೋಜಾದೇವಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ ಮತ್ತಿತರರಿದ್ದರು.







