ಮನುಸಂಸ್ಕೃತಿಯಿಂದಾಗಿ ದಲಿತರ ಮೇಲೆ ನಿಲ್ಲದ ದಬ್ಬಾಳಿಕೆ: ದಾಸಪ್ಪಎಡಪದವು
ಶಿರ್ತಾಡಿಯಲ್ಲಿ ದಲಿತ ಸಂಘರ್ಷ ಸಮಿತಿ ನೂತನ ಶಾಖೆಗೆ ಚಾಲನೆ

ಮೂಡುಬಿದಿರೆ, ಎ.16: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರುಷ ಸಂದರೂ ಸಮಾಜದಲ್ಲಿ ಇಂದಿಗೂ ದಲಿತರನ್ನು ಅಸ್ಪೃಶ್ಯರಂತೆ ಕಾಣುವ ಪದ್ಧತಿ ಮಾಯವಾಗಿಲ್ಲ. ಮನುಸಂಸ್ಕೃತಿಯನ್ನು ಸಮಾಜದಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದ್ದು, ಇದು ಭಾರತದ ಮೂಲ ನಿವಾಸಿಗಳಾದ ಬಹುಸಂಖ್ಯಾತ ದಲಿತರ ಮೇಲಿನ ದಬ್ಬಾಳಿಕೆಗೆ ಕಾರಣವಾಗಿದೆ. ದಲಿತರ ಕೆಚ್ಚು ಅಂಬೇಡ್ಕರ್ ಜಯಂತಿ ಆಚರಿಸುವದಕ್ಕಷ್ಟೇ ಸೀಮಿತವಾಗದೇ, ದೇಶದ ಸಂವಿಧಾನವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವುದಕ್ಕಾಗಿ ಪ್ರಯತ್ನ ಪಡುವ ಮೂಲಕ ಸಮಾಜದಿಂದ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಪಣ ತೊಡಬೇಕು ಎಂದು ಅವಿಭಜಿತ ದ.ಕ. ಜಿಲ್ಲೆಯ ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ, ದಲಿತಪರ ಹೋರಾಟಗಾರ ದಾಸಪ್ಪ ಎಡಪದವು ಹೇಳಿದರು.
ಶಿರ್ತಾಡಿ ದಡ್ಡಲ್‌ಪಲ್ಕೆಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ನೂತನ ಸಮಿತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುವಾದಿಗಳು ಮೂಲತಃ ಅಫ್ಘಾನ್, ಇರಾನ್, ಇರಾಕ್ ಮೂಲದವರು. ಅಖಂಡ ಭಾರತವನ್ನು ದಲಿತರು ಆಳ್ವಿಕೆ ನಡೆಸುತ್ತಿದ್ದರು. ದಲಿತರ ಆಡಳಿತದಲ್ಲಿ ಭಾರತವು ಸುಖ-ಶಾಂತಿ-ನೆಮ್ಮದಿಯಿಂದ ಹಾಗೂ ಸೌಹಾರ್ದತೆಯಿಂದಿತ್ತು. ಯಾವಾಗ ಈ ರಾಷ್ಟ್ರದ ಮೇಲೆ ಮನು ಸಂವಿಧಾನ ಹೇರಲ್ಪಟ್ಟಿತೋ ಅಂದಿನಿಂದ ಜಾತಿಗಳ ಹುಟ್ಟಿಗೆ ಕಾರಣವಾಯಿತು. ನಂತರ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಇಡೀ ದೇಶವನ್ನು ಆರ್ಯರು ತಮ್ಮ ವಶಕ್ಕೆ ಪಡೆದುಕೊಳ್ಳುವಂತಾಯಿತು. ದಲಿತರ ಮೇಲಿನ ಶತಮಾನಗಳ ದಬ್ಬಾಳಿಕೆ ಇಂದಿಗೂ ಮುಂದುವರಿದಿದ್ದು, ಅಂಬೇಡ್ಕರ್‌ರ ತೋರು ಬೆರಳಿನ ಸಂಕೇತವನ್ನು ನಾವು ಅರ್ಥ ಮಾಡಿಕೊಳ್ಳದಿರುವುದು ಇದಕ್ಕೆ ಕಾರಣ. ರಾಜಕೀಯ ಅಸ್ತ್ರವೇ ಎಲ್ಲ ಶಕ್ತಿಗಳ ಪ್ರಮುಖ ಕೀಲಿಕೈಯಾಗಿದ್ದು, ದಲಿತರು ಈ ನಿಟ್ಟಿನಲ್ಲಿ ಮುಂದೆ ಸಾಗಬೇಕಿದೆ ಎಂದರು
ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ಈ ರಾಷ್ಟ್ರದಲ್ಲಿ ಯಾವುದೇ ಧರ್ಮಗ್ರಂಥವು ದಲಿತರ ಮೇಲಿನ ದಬ್ಬಾಳಿಕೆಯಿಂದ ವಿಮೋಚನೆ ನೀಡಿಲ್ಲ. ಅಂಬೇಡ್ಕರರ ಸಂವಿಧಾನದಿಂದಾಗಿ ನಾವಿಂದು ಶಕ್ತರಾಗುವುದು ಸಾಧ್ಯವಾಗಿದೆ. ಯಾವ ಕಾಲಕ್ಕೂ ಸಂವಿಧಾನವೇ ನಮ್ಮ ರಾಷ್ಟ್ರಗ್ರಂಥವಾಗುವುದಕ್ಕೆ ಅರ್ಹತೆಯನ್ನು ಹೊಂದಿದೆ. ದಲಿತರು ಹಿಂದುತ್ವದ ಹಾದಿ ಹಿಡಿಯುವುದನ್ನು ಬಿಟ್ಟು ಅಂಬೇಡ್ಕರ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಸುಜಾತಾ ಕೆ.ಪಿ., ಶಿರ್ತಾಡಿ ಗ್ರಾ.ಪಂ. ಸದಸ್ಯ ಪ್ರವೀಣ್ ಕುಮಾರ್, ಗೋಪಾಲ ಬೋರುಗುಡ್ಡೆ, "ನಮ್ಮ ಬೆದ್ರ" ವಾರಪತ್ರಿಕೆ ಸಂಪಾದಕ ಅಶ್ರಫ್ ವಾಲ್ಪಾಡಿ, ಗೇಂದೊಟ್ಟು ಶಶಿಧರ ದೇವಾಡಿಗ ಭಾಗವಹಿಸಿದ್ದರು. ಶತಾಯುಷಿ ಮಕ್ಕಿ ವಿದ್ಯಾನಗರದ ಗುಲಾಬಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಜಯ, ಸಂಜೀವ, ರಮಾನಂದ ಉಪಸ್ಥಿತರಿದ್ದರು. ಗಣೇಶ್ ಬಿ. ಅಳಿಯೂರು ಸ್ವಾಗತಿಸಿ, ನಿರೂಪಿಸಿದರು.







