ಉ.ಕೊರಿಯದ ಕ್ಷಿಪಣಿ ಪರೀಕ್ಷೆ ವಿಫಲ

ವ್ಯೊಂಗ್‌ಯಾಂಗ್, ಎ.16: ಅಮೆರಿಕದ ಕಟುವಾದ ಎಚ್ಚರಿಕೆಗೂ ಮಣಿಯದ ಉತ್ತರ ಕೊರಿಯ ಮತ್ತೊಮ್ಮೆ ಕ್ಷಿಪಣಿಯನ್ನು ಪರೀಕ್ಷಿಸಿದೆ. ಆದರೆ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆಯೆಂದು ಅಮೆರಿಕ ಹಾಗೂ ದಕ್ಷಿಣ ಕೊರಿಯದ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊರಿಯದ ಪೂರ್ವ ಕರಾವಳಿ ಪ್ರದೇಶವಾದ ಸಿನ್‌ಪೋದಲ್ಲಿ ಕ್ಷಿಪಣಿ ಪರೀಕ್ಷೆ ನಡೆದಿರುವುದಾಗಿ ಅಮೆರಿಕದ ಸೇನಾ ಮೂಲಗಳು ತಿಳಿಸಿವೆ. ಆದರೆ ಇದು ದೀರ್ಘ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೇ ಎಂಬುದು ಸ್ಪಷ್ಟವಾಗಿಲ್ಲ.
ತನ್ನ ಸೇನಾಶಕ್ತಿಯನ್ನು ಪ್ರದರ್ಶಿಸುವ ಉದ್ದೇಶದಿಂದ ಉತ್ತರ ಕೊರಿಯದ ಮಿಲಿಟರಿ ಶನಿವಾರದಂದು ರಾಜಧಾನಿ ವ್ಯೊಂಗ್‌ಯಾಂಗ್‌ನಲ್ಲಿ ಬೃಹತ್ ಸೇನಾ ಪರೇಡ್ ನಡೆಸಿತ್ತು. ತನ್ನ ಮೇಲೆ ಯಾವುದೇ ಆಕ್ರಮಣ ನಡೆದಲ್ಲಿ, ತಕ್ಕ ಪ್ರತ್ಯುತ್ತರ ನೀಡಬಲ್ಲೆನೆಂದು ಅಮೆರಿಕಕ್ಕೆ ಮುನ್ನೆಚ್ಚರಿಕೆ ನೀಡುವ ಉದ್ದೇಶದಿಂದ ಉ.ಕೊರಿಯ ಈ ಸೇನಾಕವಾಯತನ್ನು ಏರ್ಪಡಿಸಿತ್ತು. ಇದರ ಬೆನ್ನಲ್ಲೇ ಉತ್ತರ ಕೊರಿಯ ಕ್ಷಿಪಣಿ ಪರೀಕ್ಷಿಸಿರುವುದು ಗಮನಾರ್ಹವಾಗಿದೆ.
ಈ ಮಧ್ಯೆ ಉತ್ತರ ಕೊರಿಯ, ಆರನೆ ಬಾರಿಗೆ ಪರಮಾಣು ಪರೀಕ್ಷೆಯನ್ನು ನಡೆಸಲು ಸಿದ್ಧವಾಗುತ್ತಿದೆಯೆಂಬ ವರದಿಗಳು ಬಂದಿವೆ. ಈ ಅಣ್ವಸ್ತ ಪರೀಕ್ಷೆಯನ್ನು ಉಮೆರಿಕವು ಪ್ರಬಲವಾಗಿ ವಿರೋಧಿಸುತ್ತಿದೆ. ಉತ್ತರ ಕೊರಿಯವು ಅಣ್ವಸ್ತ್ರ ಪರೀಕ್ಷೆಯಿಂದ ಹಿಂದೆ ಸರಿಯದಿದ್ದಲ್ಲಿ ಪ್ರಬಲವಾದ ಹೊಡೆತ ನೀಡುವುದಾಗಿ ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದೆ.





