ಗಂಗಾ ನದಿಯ ಶುದ್ದಿಕಾರಿ ಪಾಚಿ ವಿನಾಶ ದಂಚಿಗೆ
ಲಕ್ನೊ, ಎ.16: ಗಂಗಾ ನದಿಯ ನೀರಿನಡಿ ಬೆಳೆದು ನೀರನ್ನು ಪ್ರಾಕೃತಿಕವಾಗಿ ಶುದ್ದಗೊಳಿಸುವ ಪಾಚಿ(ಸಸ್ಯದ ರೀತಿಯ ಒಂದು ಪ್ರಭೇದ) ವಿನಾಶದ ಅಂಚಿಗೆ ತಲುಪಿದೆ. ತ್ಯಾಜ್ಯ ನೀರು ಮತ್ತು ಮಾನವನಿಂದ ನಿರ್ಮಿತವಾದ ಮಲಿನಕಾರಿ ವಸ್ತುಗಳು ನಿರಂತರವಾಗಿ ಗಂಗೆಯ ತಡಿಯನ್ನು ಸೇರುತ್ತಿರುವುದು ಈ ನೈಸರ್ಗಿಕ ಪಾಚಿಗಳ ಬೆಳವಣಿಗೆಗೆ ತಡೆಯೊಡ್ಡಿದೆ ಎಂದು ವರದಿಯೊಂದು ತಿಳಿಸಿದೆ.
ಗಂಗಾ ನದಿ ನೀರಿನಲ್ಲಿ ಮಾಲಿನ್ಯದ ಅಂಶ ಹೆಚ್ಚುತ್ತಿದ್ದಂತೆಯೇ, ಈ ಪಾಚಿಗಳ ಬೆಳವಣಿಗೆಗೆ ಅಗತ್ಯವಾಗಿರುವ ನೀರಿನಲ್ಲಿರುವ ಸಾರಜನಕ-ರಂಜಕದ ಅನುಪಾತದಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ಪ್ರೊ.ಜಿತೇಂದ್ರ ಪಾಂಡೆ ನೇತೃತ್ವದ ನಾಲ್ವರು ವೈಜ್ಞಾನಿಗಳು ನಡೆಸಿರುವ ವೈಜ್ಞಾನಿಕ ಅಧ್ಯಯನದಲ್ಲಿ ತಿಳಿದು ಬಂದಿದೆ.
ಪಾಚಿಗಳಂತಹ ಹಲವಾರು ನೈಸರ್ಗಿಕ ಶುದ್ಧಿಕಾರಿಗಳು ಗಂಗಾ ನದಿಯಲ್ಲಿ ತನ್ನಿಂದ ತಾನೇ ಬೆಳೆಯುತ್ತವೆ. ಇದಕ್ಕೆ 16:1ರ ಪ್ರಮಾಣದ ಸಾರಜನಕ-ರಂಜಕದ ಅಗತ್ಯವಿದೆ.ಆದರೆ 10ಕ್ಕೂ ಹೆಚ್ಚಿನ ಬೃಹತ್ ಕೊಳವೆಗಳಿಂದ ನದಿಗೆ ಹರಿದು ಬರುತ್ತಿರುವ ಕೊಳಚೆ ನೀರು ಈ ಪ್ರಮಾಣವನ್ನು ವ್ಯತಿರಿಕ್ತಗೊಳಿಸಿದೆ. ರಂಜಕದ ಪ್ರಮಾಣ ಹೆಚ್ಚಿದ್ದು ಶುದ್ದಿಕಾರಿ ಪಾಚಿಯ ಬೆಳವಣಿಗೆಗೆ ತಡೆಯೊಡ್ಡಿ ಅದನ್ನು ವಿನಾಶದ ಅಂಚಿಗೆ ತಲುಪಿಸಿದೆ ಎಂದು ಪ್ರೊ.ಪಾಂಡೆ ತಿಳಿಸಿದ್ದಾರೆ.
ತ್ಯಾಜ್ಯ ಮತ್ತು ಕೊಳಚೆ ನೀರನ್ನು ಗಂಗಾ ನದಿಗೆ ನೇರವಾಗಿ ವಿಲೇವಾರಿ ಮಾಡುವುದಕ್ಕೆ ಸಾಧ್ಯವಾದಷ್ಟು ತಡೆಯೊಡ್ಡಬೇಕು. ಇದರಿಂದ ಈ ಪಾಚಿಗಳು ಬೆಳೆಯಲು ಸಾಧ್ಯವಿದೆ. ಅಲ್ಲದೆ ನದಿ ನೀರನ್ನು ಬಳಸುವವರು ಸಾಬೂನು ಬಳಸುವುದನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಈ ತಂಡವು ಗಂಗಾ-ಯಮುನಾ, ಗಂಗಾ-ಗೋಮತಿ, ಗಂಗಾ-ಸಾಯಿ ಮತ್ತು ಗಂಗಾ- ಅಸ್ಸಿ ಸಂಗಮ ಸ್ಥಳಗಳಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ಸಂಶೋಧನೆಗೆ ಬಳಸಿಕೊಂಡಿತ್ತು. ಆದಾಗ್ಯೂ, ಕೆಲವು ಪ್ರಬೇಧದ ಪಾಚಿಗಳು ಈ ಮಲಿನಕಾರಿ ತ್ಯಾಜ್ಯದ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವುದು ಗಮನಾರ್ಹವಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಬೃಹತ್ ಜಾಗೃತಿ ಅಭಿಯಾನ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ನದಿನೀರಿನ ಮಾಲಿನ್ಯ ಮಟ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಜನತೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಪ್ರೊ.ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.