ಮಕ್ಕಳಿಗೆ ಹಾವುಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ ವಿಶಿಷ್ಟ ಬೇಸಿಗೆ ಶಿಬಿರ

ಚಿಕ್ಕಮಗಳೂರು, ಎ.16: ಹಾವುಗಳು ಕಂಡರೆ ಸಾಕು ಹಿರಿಯರು, ಕಿರಿಯರೆಂಬ ವ್ಯತ್ಯಾಸವಿಲ್ಲದೆ ಕಾಲ್ಕೀಳುವುದು ಸರ್ವೇ ಸಾಮಾನ್ಯವಾದ ಸಂಗತಿ. ಕೆಲವರಂತೂ ಹಾವು ಕಂಡರೆ ನಿಂತ ಸ್ಥಳದಿಂದ ಕದಲುವುದಿಲ್ಲ. ಹಾವುಗಳಲ್ಲಿ ಎಲ್ಲಾ ಹಾವುಗಳು ಕೆಟ್ಟದ್ದಲ್ಲ, ಕೆಲವು ಹಾವುಗಳು ಕಚ್ಚಿದರೆ ಪ್ರಾಣಾಪಾಯವಾಗುವುದಿಲ್ಲ. ಕೆಲವು ವಿಷಜಂತುಗಳು ಕಚ್ಚಿದರೆ ಮರು ಕ್ಷಣ ಸಾವು ಸಂಭವಿಸುವ ಅಪಾಯವಿದೆ. ಹಾವಿನ ಬಗ್ಗೆ ಕೆಲವರಿಗೆ ಅನೇಕ ವಿಷಯಗಳ ಅರಿವಿಲ್ಲ. ಅದನ್ನು ತಿಳಿಯುವ ಸಣ್ಣ ಪ್ರಯತ್ನಕ್ಕೂ ಯಾರು ಕೈ ಹಾಕುವುದಿಲ್ಲ. ಇಂತಹದ್ದರಲ್ಲಿ ಚಿಕ್ಕಮಗಳೂರು ನಗರದ ವಿಶ್ವಮಾನವ ಎಜುಕೇಶನ್ ಟ್ರಸ್ಟ್ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದಲ್ಲಿ ಹಾವುಗಳ ಬಗ್ಗೆ ಮಕ್ಕಳಿಗೆ ಮಹತ್ವದ ವಿಚಾರಗಳ ಅರಿವು ಮೂಡಿಸುವ ಪ್ರಯತ್ನ ನಡೆಯಿತು.
ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಇಂತಹ ಮಾಹಿತಿ ನೀಡುತ್ತಿರುವುದಕ್ಕೆ ಮಕ್ಕಳ ಪೋಷಕರಿಂದ ಒಳ್ಳೆಯ ಮಾತುಗಳು ವ್ಯಕ್ತವಾಗಿವೆ. ಬೇಸಿಗೆ ಕಾಲದಲಿ ನಡೆಯುವ ಬೇಸಿಗೆ ಶಿಬಿರಗಳಲ್ಲಿ ತರಹೇವಾರಿ ವಿಷಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಒಂದು ವಾರ, ಹದಿನೈದು ದಿನ, ಒಂದು ತಿಂಗಳಲ್ಲಿ ಮಕ್ಕಳಿಗೆ ಹಲವು ವಿಚಾರಗಳನ್ನು ಕಲಿಸಲು ಬೇಸಿಗೆ ಶಿಬಿರಗಳು ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತವೆ. ಕೆಲವು ಕಡೆ ಹಣ ಗಳಿಸಲಿಕ್ಕಾಗಿಯೇ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುವುದೂ ಕೂಡ ಇದೆ.
ಈ ನಡುವೆ ಚಿಕ್ಕಮಗಳೂರು ನಗರದ ವಿಶ್ವಮಾನವ ಎಜುಕೇಶನ್ ಟ್ರಸ್ಟ್ ಏರ್ಪಡಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆಟದ ಜೊತೆ ಕೆಲ ಉಪಯುಕ್ತ ಮಾಹಿತಿಯನ್ನು ನೀಡುವ ಪ್ರಯತ್ನ ಅಚ್ಚುಕಟ್ಟಾಗಿ ನಡೆಯುತ್ತಿದೆ. ಎಳೆಯ ಮಕ್ಕಳಿಗೆ ಹಾವಿನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಈ ಶಿಬಿರದಲ್ಲಿ ಪ್ರಖ್ಯಾತ ಉರಗ ತಜ್ಞ ಸ್ನೇಕ್ ನರೇಶ್ ಹಾವಿನ ಬಗ್ಗೆ ಅರಿವು ಮೂಡಿಸಿದರು. ಹಾವುಗಳ ಜೀವನ ಶೈಲಿ, ವಾಸ, ವಿವಿಧ ಜಾತಿಯ ಹಾವುಗಳ ಚಲನವಲಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಮಕ್ಕಳು ಕೂಡ ಇದನ್ನು ಕಂಡು ಎಂಜಾಯ್ ಮಾಡಿದರು. ಇದರ ಜೊತೆಗೆ ಸ್ನೇಕ್ ನರೇಶ್ ಜೀವಂತ ಎರಡು ಹಾವುಗಳನ್ನು ತಮ್ಮ ಚೀಲದಲ್ಲಿ ತಂದು ತೋರಿಸಿದರು. ವಿಷಕಾರಿ ನಾಗರಹಾವು ಮತ್ತು ಬೃಹತ್ ಗಾತ್ರದ ಕೆರೆ ಹಾವುಗಳನ್ನ ಮಕ್ಕಳಿಗೆ ತೋರಿಸುವ ಮೂಲಕ ಅವುಗಳ ಚಲನವಲನ ಬಗ್ಗೆ ತಿಳಿಸಿದರು. ಜೊತೆಗೆ ಶಾಲಾ ಮಕ್ಕಳಿಗೆ ಹಾವುಗಳನ್ನು ಹಿಡಿಯಲು, ಮುಟ್ಟಲು ಅವಕಾಶ ಮಾಡಿಕೊಟ್ಟರು. ಮಕ್ಕಳ ವಿಷಕಾರಿ ಹಾವು ಅನ್ನುವ ಭಯ ಇಲ್ಲದೆ ಸುಲಭವಾಗಿ ಹಾವುಗಳನ್ನು ಮುಟ್ಟಿ ಸಂಭ್ರಮಿಸಿದರು.







