ನಿರಾಶ್ರಿತರಿಗೆ ನಿವೇಶನ ಒದಗಿಸದಿದ್ದರೆ ಕ್ರಮ

ಅಧಿಕಾರಿಗಳ ಸಭೆ
ಮಡಿಕೇರಿ, ಎ.1: ಜಿಲ್ಲೆಯಲ್ಲಿ ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ಒಂದು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸ್ಪಷ್ಟ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಂದಾಯಾ ಧಿಕಾರಿಗಳೊಂದಿಗೆ ರವಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸಚಿವರು ಮಾತನಾಡಿದರು. ಆಯಾಯ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತರಿಂದ ಅರ್ಜಿ ಪಡೆದು ನಿವೇಶನ ಹಂಚಿಕೆ ಮಾಡಲು ಮುಂದಾಗಬೇಕು. ಈ ಕೆಲಸ ಒಂದು ತಿಂಗಳ ಒಳಗೆ ಆಗಲೇಬೇಕು, ಇಲ್ಲದಿದ್ದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅಕ್ರಮ ಸಕ್ರಮ ಸಮಿತಿಯಲ್ಲಿ ಇಬ್ಬರು ಸದಸ್ಯರು ಹಾಜರಾದರೆ ಸಾಕು, ಅನುಮೋದನೆ ಪಡೆದುಕೊಳ್ಳಬಹುದಾಗಿದೆ.
ಆ ನಿಟ್ಟಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಸದಸ್ಯರು ಹಾಜರಾಗದಿದ್ದರೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವಂತೆ ತಹಶೀಲ್ದಾರರಿಗೆ ಕಂದಾಯ ಸಚಿವರು ನಿರ್ದೇಶನ ನೀಡಿದರು. ಅಕ್ರಮ ಸಕ್ರಮ ಯೋಜನೆಯಡಿ ಸೋಮವಾರಪೇಟೆ ತಾಲೂಕಿನಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಈ ತಾಲೂಕಿಗೆ ಹೆಚ್ಚುವರಿ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಲಾಗುವುದು. ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತುಂಬಾ ವಿಳಂಬ ಮಾಡಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಕಂದಾಯ ಇಲಾಖೆಯ ಅರ್ಜಿಗಳು ವಿಳಂಬವಾಗದಂತೆ ನೋಡಿಕೊಳ್ಳುವುದು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದುತಿಳಿಸಿದರು. ಜಿಲ್ಲೆಯಲ್ಲಿ ಆದಿವಾಸಿಗಳ ಜನಸಂಖ್ಯೆ ಎಷ್ಟು, ಅರಣ್ಯ ಹಕ್ಕು ಕಾಯ್ದೆಯಡಿ ಎಷ್ಟು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ನಿವೇಶನ ಹಾಗೂ ಭೂಮಿ ಇಲ್ಲದ ಕುಟುಂಬಗಳು ಎಷ್ಟು? ಈ ಬಗ್ಗೆ ಕೂಡಲೇ ಮಾಹಿತಿಯ ಪಟ್ಟಿ ಒದಗಿಸುವಂತೆ ಸಚಿವರು ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಂದಾಯ ಭೂಮಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧಕ್ಷೆ ಪದ್ಮಿನಿ ಪೊನ್ನಪ್ಪ, ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವೀರಾಜಪೇಟೆ ತಾಲೂಕಿಗೂ ಉಪ ಸಮಿತಿ ರಚಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು. ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಭೂ ದಾಖಲೆಗಳ ಉಪ ನಿರ್ದೇಶಕರು, ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ದೊಡ್ಡ ಪ್ಲಾಂಟೇಷನ್‌ದಾರರ ಮಾಹಿತಿ ಕೊಡಿ’
ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿರುವ ದೊಡ್ಡ ದೊಡ್ಡ ಪ್ಲಾಂಟೇಷನ್‌ದಾರರು ಇದ್ದು, ಇಂಥವರನ್ನು ಗುರುತಿಸಿ ಮಾಹಿತಿಯ ಪಟ್ಟಿ ಕೊಡಿ, ಅವಕಾಶವಿದ್ದರೆ ಬಡವರಿಗೆ ಭೂಮಿ ಹಂಚಲು ಪ್ರಯತ್ನಿಸಲಾಗುವುದೆಂದು ಸಚಿವರು ಹೇಳಿದ್ದಾರೆ. ಉಳುಮೆಗೆ ತರಬೇತಿ
ಕೆಲವು ಆದಿವಾಸಿಗಳು ಈಗಾಗಲೇ ನೀಡಲಾಗಿರುವ ಜಮೀನನ್ನು ಮಾರಿಕೊಂಡಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಆದಿವಾಸಿಗಳ ಹೆಸರಿನಲ್ಲಿಯೇ ಆರ್‌ಟಿಸಿ ಇದೆ, ಆದರೆ ಉಳುಮೆ ಮಾಡುತ್ತಿಲ್ಲ. ಆದಿವಾಸಿಗಳ ಹೆಸರಿನಲ್ಲಿರುವ ಭೂಮಿಯನ್ನು ಆದಿವಾಸಿಗಳೇ ಉಳುಮೆ ಮಾಡಬೇಕು. ಕೃಷಿ ಚಟುವಟಿಕೆ ಕೈಗೊಳ್ಳಲು ಎತ್ತುಗಳ ಖರೀದಿಗೆ ಸಹಾಯಧನ ನೀಡಲಾಗುವುದು, ಹಾಗೆಯೇ ಉಳುಮೆಗೆ ತರಬೇತಿಯನ್ನೂ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
‘ಹಕ್ಕುಪತ್ರ ನೀಡದೇ ನಿರ್ಲಕ್ಷ ವಹಿಸಿದರೆ ಕ್ರಮ’
ದಿಡ್ಡಳ್ಳಿ ನಿರಾಶ್ರಿತರಿಗೆ ಬಡಾವಣೆ ನಿರ್ಮಾಣ
ಕಾಮಗಾರಿಗೆ ಚಾಲನೆ,ಕಂದಾಯ ಸಚಿವರಿಂದ ಪರಿಶೀಲನೆ
ವೀರಾಜಪೇಟೆ: ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರಿಕಾಡು ಪೈಸಾರಿ ಪ್ರದೇಶದಲ್ಲಿ ದಿಡ್ಡಳ್ಳಿಯ ಸುಮಾರು 176 ಮಂದಿ ನಿರಾಶ್ರಿತರಿಗಾಗಿ ನಿರ್ಮಾಣ ಮಾಡುತ್ತಿರುವ ಬಡಾವಣೆಯ ಕಾಮಗಾರಿಗೆ ಇಂದು ಚಾಲನೆ ದೊರೆತ್ತಿದ್ದು, ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಅರಣ್ಯ ಇಲಾಖೆ ಎಲ್ಲ ಭೂಮಿಯನ್ನು ‘ಡಿ’ ಆ್ಯಂಡ್ ‘ಸಿ’ ಲ್ಯಾಂಡ್ ಎಂದು ಪರಿವರ್ತಿಸಿ ಘೋಷಿಸಿರುವುದರಿಂದ ನಿರಾಶ್ರಿತರಿಗೆ ಜಾಗ ಮಂಜೂರು ಮಾಡಲು ತೊಂದರೆಯಾಗುತ್ತಿದೆ. ಇದನ್ನು ಮುಕ್ತಗೊಳಸಿದರೆ ನಿರಾಶ್ರಿತರಿಗೆ ಜಾಗ ಮಂಜೂರು ಮಾಡಲು ಸುಲಭವಾಗುತ್ತದೆ ಎಂದು ಸಚಿವರನ್ನು ಸ್ಥಳದಲ್ಲಿಯೇ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅರಣ್ಯ ಸಚಿವರೊಂದಿಗೆ ಸಮಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದಭರ್ದಲ್ಲಿ ಕಂದಾಯ ಇಲಾಖೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಆಗಮಿಸಿದ್ದ ತಾಲೂಕು ತಹಶೀಲ್ದಾರ್ ಮಹದೇವ ಸ್ವಾಮಿ ಹಾಗೂ ಕೆದಮುಳ್ಳೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಸುಬ್ಬಯ್ಯ ಅವರನ್ನು ಸಚಿವರು ತರಾಟೆಗೆ ತೆಗೆುಕೊಂಡ ಪ್ರಸಂಗ ನಡೆಯಿತು.
ಗ್ರಾಮ ಪಂಚಾಯತ್‌ನ ಪ್ರತಿಯೊಂದು ಕಾರ್ಯ ವೈಖರಿಯ ಬಗ್ಗೆ ನಿಮಗೆ ಅರಿವಿರಬೇಕು ಇಲ್ಲದಿದ್ದರೆ ಕ್ರಮಕ್ಕೆ ಮುಂದಾಗುವುದಾಗಿ ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಮಹದೇವಸ್ವಾಮಿ ಹಾಗೂ ಪಂಚಾಯತ್ ಅಧಿಕಾರಿ ಸುಬ್ಬಯ್ಯ ಅವರ ವಿರುದ್ಧ ಗ್ರಾಮಸ್ಥರು ಸಚಿವರಿಗೆ ನೇರವಾಗಿ ದೂರು ನೀಡಿದರು. ವೀರಾಜಪೇಟೆ ತಾಲೂಕು ಕಚೇರಿಯ ಆಡಳಿತದ ದುಸ್ಥಿತಿ ಸೇರಿದಂತೆ ಗ್ರಾಮ ಪಂಚಾಯತ್ ಅಧಿಕಾರಿಯಾಗಲಿ, ತಹಶೀಲ್ದಾರ್ ಆಗಲಿ ಈವರೆಗೂ ಗ್ರಾಮದ ನಿರ್ಗತಿಕರಿಗೆ ಜಾಗದ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.
ನಂತರ ಮಾತನಾಡಿದ ಸಚಿವರು, ನಿರಾಶ್ರಿತರಿಗೆ ಹಕ್ಕು ಪತ್ರ ನೀಡುವಲ್ಲಿ ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು. ಹಕ್ಕು ಪತ್ರ ನೀಡುವ ಮೊದಲೇ ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ನೀರಿಗಾಗಿ ಆಯ್ದ ಸ್ಥಳಗಳಲ್ಲಿ ಕೊಳವೆ ಬಾವಿಯನ್ನು ತೆಗೆಯಬೇಕು. ಇದಕ್ಕೆ ಗುತ್ತಿಗೆದಾರರು ಮುತುವರ್ಜಿ ವಹಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಈ ಸಂದಭರ್ದಲ್ಲಿ ಎಂಎಲ್ಸಿ ವೀಣಾ ಅಚ್ಚಯ್ಯ, ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರೇಷ್ಮೆ ನಿಗಮ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಪಕ್ಷದ ತಾಪಂ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಮಾಳೇಟಿರ ಬೆಲ್ಲು ಬೋಪಯ್ಯ, ಎಂ.ಎಸ್.ಪೂವಯ್ಯ, ಆರ್.ಎಂ.ಸಿ.ಸದಸ್ಯ ಎಂ.ಕೆ.ಬೋಪಣ್ಣ, ಪಕ್ಷದ ಅಲ್ಪ ಸಂಖ್ಯಾತರ ಘಟಕದ ಯಾಕೂಬ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







