ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ
ಬೆಂಗಳೂರು,ಎ.16: ಮೂರು ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಬಾಲಕನನ್ನು ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಹೆಣ್ಣೂರಿನ ಸಂಶದ್ ಅಲಿ ತಲೆಮರೆಸಿಕೊಂಡಿದ್ದು, ಅಪಹರಣಕ್ಕೊಳಗಾಗಿದ್ದ ಎಯತೇಶ್ ನನ್ನು ಪೊಲೀಸರು ರಕ್ಷಿಸಿದ್ದಾರೆ.
ವೃತ್ತಿಯಲ್ಲಿ ಪೈಂಟರ್ ಆಗಿದ್ದ ರಹಮತ್ ಅವರೊಂದಿಗೆ ಪಕ್ಕದ ಮನೆಯ ಸಂಶದ್ ಅಲಿ ಜಗಳ ಮಾಡಿಕೊಳ್ಳುತ್ತಿದ್ದ. ಇತ್ತೀಚೆಗೆ ರಹಮತ್ ಅವರ ಮೂರು ವರ್ಷದ ಮಗ ಎಯತೇಶ್‌ನನ್ನು ಅಪಹರಿಸಿ ಉತ್ತರ ಪ್ರದೇಶಕ್ಕೆ ಹೋಗಲು ನಿರ್ಧರಿಸಿ ದೆಹಲಿಗೆ ತೆರಳಿದ್ದನು. ಆತಂಕಗೊಂಡ ರಹಮತ್ ಅವರು ಮಗು ನಾಪತ್ತೆಯಾದ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ದೆಹಲಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ದೆಹಲಿಗೆ ತೆರಳಿದ ಪೊಲೀಸರು ಅಲ್ಲಿನ ಪೊಲೀಸರ ಸಹಾಯದೊಂದಿಗೆ ದೆಹಲಿ ಹೊರವಲಯದ ಬಳಿ ಆರೋಪಿ ಇರುವ ಬಗ್ಗೆ ಖಚಿತಪಡಿಸಿಕೊಂಡು, ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಎಯತೇಶ್‌ನನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬರುವ ಸೂಚನೆ ಅರಿತ ಆರೋಪಿಯು ತಲೆಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.





